ಮುಂಬೈ
ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಚಿತ್ರ ಎಮರ್ಜೆನ್ಸಿ ಇಂದು ಬಿಡುಗಡೆಯಾಗಿದೆ. 1975ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ ಐತಿಹಾಸಿಕ ಸನ್ನಿವೇಶದ ಚಿತ್ರಣ ಹೊಂದಿರುವ ಸಿನಿಮಾ ಇದಾಗಿದ್ದು, ಈ ಚಿತ್ರದ ಬಿಡುಗಡೆಗೆ ಆರಂಭದಿಂದಲೂ ಸಾಕಷ್ಟು ತೊಡಕುಗಳು ಉಂಟಾಗಿದ್ದವು. ಸಾಲದೆನ್ನುವಂತೆ ಕಾನೂನು ಸಮರವನ್ನೂ ಎದುರಿಸುವಂತಹ ಸ್ಥಿತಿ ಎದುರಾಗಿತ್ತು. ಇದೀಗ ಎಲ್ಲಾ ಅಡೆತಡೆಗಳನ್ನು ಬದಿಗೆ ಸರಿಸಿ ಇಂದು ದೇಶಾದ್ಯಂತ ಸಿನಿಮಾ ರಿಲೀಸ್ ಆಗಿದೆ. ಆದರೆ ಪಂಜಾಬ್‌ನಲ್ಲಿ ಮಾತ್ರ ಈ ಚಿತ್ರದ ಬಿಡುಗಡೆಗೆ ತಡೆಯೊಡ್ಡಲಾಗಿದೆ.
ಪಂಜಾಬ್ ರಾಜ್ಯದ ಥಿಯೇಟರ್ ಮಾಲೀಕರು ʻಎಮರ್ಜೆನ್ಸಿʼ ಸಿನಿಮಾ ವಿರುದ್ಧ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಇಂದು ಭಾರತದಾದ್ಯಂತ ಚಿತ್ರ ಬಿಡುಗಡೆಯಾಗಿದ್ದರೂ, ಪಂಜಾಬ್‌ನ ಚಿತ್ರಮಂದಿರ ಮಾಲೀಕರು ಚಿತ್ರವನ್ನು ಪ್ರದರ್ಶಿಸದಿರಲು ನಿರ್ಧರಿಸಿದ್ದಾರೆ. ಆದಾಗ್ಯೂ, ರಾಜ್ಯ ಸರ್ಕಾರ ಚಿತ್ರದ ಮೇಲೆ ಯಾವುದೇ ನಿಷೇಧವನ್ನು ವಿಧಿಸಿಲ್ಲ ಎಂಬುದು ಗಮನಾರ್ಹ. ಗುರುವಾರ, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC) ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಕೂಡ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆದು ರಾಜ್ಯದಲ್ಲಿ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
“ಸಿಖ್ಖರ ಪವಿತ್ರ ದೇವಾಲಯ, ಶ್ರೀ ಹರ್ಮಂದರ್ ಸಾಹಿಬ್, ಅತ್ಯುನ್ನತ ಧಾರ್ಮಿಕ ಪೀಠ, ಅಕಲ್ ತಖ್ತ್ ಸಾಹಿಬ್ ಮತ್ತು ಇತರ ಗುರುದ್ವಾರಗಳ ಮೇಲಿನ ದಾಳಿಗಳು ಮತ್ತು ಸಿಖ್ ನರಮೇಧ (1984 ರ) ಗೆ ಸಂಬಂಧಿಸಿದ ಸಂಗತಿಗಳನ್ನು ಮರೆಮಾಚುವ ಮೂಲಕ, ಈ ಚಿತ್ರವು ಸಿಖ್ ವಿರೋಧಿ ರೀತಿಯಲ್ಲಿ ಮೂಡಿಬಂದಿದೆ. ಆದ್ದರಿಂದ, ಈ ಚಿತ್ರವನ್ನು ಪಂಜಾಬ್‌ನಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಬೇಕೆಂದು ನಾವು ಮತ್ತೆ ಒತ್ತಾಯಿಸುತ್ತೇವೆ. ಬಿಡುಗಡೆಯಾದರೆ, ನಾವು ಅದನ್ನು ಬಲವಾಗಿ ಪ್ರತಿಭಟಿಸಬೇಕಾಗುತ್ತದೆ” ಎಂದು ಧಾಮಿ ಪತ್ರದಲ್ಲಿ ತಿಳಿಸಿದ್ದಾರೆ.