ರಾಜ್ಯದ 2 ಲಕ್ಷ ಶಿಕ್ಷಕರ ಭವಿಷ್ಯ ಅತಂತ್ರ; ದೆಹಲಿಯಲ್ಲಿ ಇಂದು ಪ್ರತಿಭಟನೆ

ಬೆಂಗಳೂರು

       ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ  ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ನವದೆಹಲಿಯ ಜಂತರ್ ಮಂತರ್‌ನಲ್ಲಿ  ಬೃಹತ್ ಪ್ರತಿಭಟನೆ ಜರುಗಲಿದೆ. ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ವತಿಯಿಂದ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಸಹಸ್ರಾರು ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್  ಆದೇಶದಂತೆ ಕರ್ನಾಟಕದ 2 ಲಕ್ಷ, ದೇಶದ 30 ಲಕ್ಷ ಶಿಕ್ಷಕರು ಶಿಕ್ಷಕ ವೃತ್ತಿಯಲ್ಲಿ ಮುಂದುವರೆಯಬೇಕಾದರೇ 2 ವರ್ಷದಲ್ಲಿ ಕಡ್ಡಾಯವಾಗಿ ಟಿಇಟಿ ಪಾಸಾಗಬೇಕಿದೆ. ಕೇಂದ್ರ ಸರ್ಕಾರ ದೇಶದ 30 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಈ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಒಂದು ದಿನದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

     ʼʼಈಗಾಗಲೇ ಕರ್ನಾಟಕ ಸರ್ಕಾರ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿ ಪೂರಕ ಮಾಹಿತಿ ಸಂಗ್ರಹಿಸುತ್ತಿದೆ. ಅದೇ ರೀತಿ ಶಿಕ್ಷಕರ ಫೆಡರೇಷನ್ ಕೂಡ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆʼʼ ಎಂದು ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್‌ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ  ತಿಳಿಸಿದ್ದಾರೆ. 

     ʼಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಲೋಕಸಭೆಯಲ್ಲಿ ಇದಕ್ಕಾಗಿ ವಿಶೇಷ ಕಾಯ್ದೆ ತಂದು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸೇವಾ ರಕ್ಷಣೆ ನೀಡಿ, ಸುಪ್ರೀಂಕೋರ್ಟ್‌ನ ಈ ಆದೇಶ ಪೂರ್ವಾನ್ವಯಗೊಳಿಸದೆ ಮುಂದಿನ ನೇಮಕಾತಿಗಳಲ್ಲಿ ಟಿಇಟಿ ಕಡ್ಡಾಯಗೊಳಿಸುವಂತೆ ಒತ್ತಾಯ ಮಾಡಲಾಗುತ್ತಿದೆʼʼ ಎಂದು ಹೇಳಿದ್ದಾರೆ.

    ʼʼಈಗಾಗಲೇ 25ರಿಂದ 30 ವರ್ಷ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುವವರು ಕೂಡಾ ಕಡ್ಡಾಯವಾಗಿ ಟಿಇಟಿ ಪಾಸ್‌ ಮಾಡಬೇಕೆಂಬ ತೀರ್ಪು ಮಾರಕವಾಗಿದೆ. ಟಿಇಟಿ‌ ಎಂಬುದು ಶಿಕ್ಷಕರ ಅರ್ಹತಾ ಪರೀಕ್ಷೆಯಾಗಿದ್ದು, ಕರ್ನಾಟಕದಲ್ಲಿ 2014ರಲ್ಲಿ ಮೊದಲ ಬಾರಿಗೆ ಜಾರಿಗೆ ಬಂದಿದೆ. ಅದಕ್ಕೂ ಮೊದಲಿನ ಶಿಕ್ಷಕರು ಕೂಡಾ ಟಿಇಟಿ ಪಾಸಾಗಬೇಕಿದೆʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ʼʼಮೊದಲಿನ ಶಿಕ್ಷಕರು ಸಿಇಟಿ ಪರೀಕ್ಷೆಯನ್ನು ಪಾಸಾಗಿ ಶಿಕ್ಷಕರಾಗಿದ್ದಾರೆ. ಈಗ ಅವರು ಕೂಡಾ ಟಿಇಟಿ ಪಾಸಾಗಬೇಕಿದೆ. ಹೀಗಾಗಿ ಈ ಹೋರಾಟ ನಡೆಯಲಿದೆʼʼ ಎಂದು ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link