ಸುರತ್ಕಲ್‌ : ಮಸೀದಿ ಮೇಲೆ ಕಲ್ಲು ತೂರಾಟ : ಪರಿಸ್ಥಿತಿ ಉದ್ವಿಗ್ನ

ಮಂಗಳೂರು

    ಕೋಮು ಸೂಕ್ಷ್ಮ ಪ್ರದೇಶವಾಗಿರುವ ಮಂಗಳೂರಿನ ಹೊರವಲಯದ ಸುರತ್ಕಲ್​​ ಬಳಿಯ ಕಾಟಿಪಳ್ಳದಲ್ಲಿ ಭಾನುವಾರ ರಾತ್ರಿ ಮಸೀದಿ ಮೇಲೆ ಕಲ್ಲು ತೂರಾಟ ನಡೆದಿದೆ. ಕಾಟಿಪಳ್ಳ 3ನೇ ಬ್ಲಾಕ್​​ನ ಬದ್ರಿಯಾ ಮಸೀದಿ ಮೇಲೆ ಕಲ್ಲೆಸೆತ ನಡೆದಿದೆ. ಕಲ್ಲು ತೂರಾಟದಿಂದ ಮಸೀದಿಯ ಗಾಜು ಪುಡಿ ಪುಡಿಯಾಗಿದೆ. ಈದ್ ಮಿಲಾದ್ ಮುನ್ನಾ ದಿನವೇ ಘಟನೆ ಸಂಭವಿಸಿದ್ದು, ಆತಂಕಕ್ಕೆ ಕಾರಣವಾಗಿದೆ.

   ಭಾನುವಾರ ರಾತ್ರಿ 10.30ರ ಸುಮಾರಿಗೆ 2 ಬೈಕ್​ಗಳಲ್ಲಿ ಬಂದಿದ್ದ ನಾಲ್ವರು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಸುರತ್ಕಲ್​​ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳದ ಮಸೀದಿಗೆ ಸದ್ಯ ಬಿಗಿ ಪೊಲೀಸ್​​​ ಬಂದೋಬಸ್ತ್​​​​​​​ ಕಲ್ಪಿಸಲಾಗಿದೆ. 

  ಪ್ರಚೋದನಕಾರಿ ಹೇಳಿಕೆ ನೀಡಿದ ವಿಚಾರವಾಗಿ ವಿಎಚ್​​ಪಿ ಹಾಗೂ ಬಜರಂಗದಳ ಮುಖಂಡರಾದ ಶರಣ್ ಪಂಪ್​ವೆಲ್ ಮತ್ತು ಪುನೀತ್ ಅತ್ತಾವರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ಹರಿಬಿಟ್ಟಿದ್ದ ಪುನಿತ್ ಅತ್ತಾವರ ವಿರುದ್ಧ ಮಂಗಳೂರಿನ‌ ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿರುವ ಮಂಗಳೂರು ಪೊಲೀಸರು, ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಈಗಾಗಲೇ ಎಚ್ಚರಿಕೆಯನ್ನೂ ನೀಡಿದ್ದಾರೆ.

    ಇಂದು ವಿಎಚ್​​ಪಿ ಹಾಗೂ ಬಜರಂಗದಳ ಮುಖಂಡರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿ ರೋಡ್ ಚಲೋಗೆ ಕರೆ ಕೊಟ್ಟಿದ್ದಾರೆ. ವಿಎಚ್​​ಪಿ ಮುಖಂಡ ಶರಣ್ ಪಂಪ್​​ವೆಲ್​ಗೆ ಮುಸ್ಲಿಂ ಮುಖಂಡರು ಸವಾಲು ಹಾಕಿದ್ದ ಕಾರಣ ಈ ಜಾಥಾಕ್ಕೆ ಕರೆ ನೀಡಲಾಗಿದೆ.

   ತಾಕತ್ತಿದ್ದರೆ ನಾಳೆ ಈದ್ ಮಿಲಾದ್ ಮೆರವಣಿಗೆ ತಡೆಯಿರಿ ಎಂದು ಶರಣ್ ಪಂಪ್​​ವೆಲ್​ಗೆ ಮುಸ್ಲಿಂ ಮುಖಂಡರು ಸವಾಲು ಹಾಕಿದ್ದರು. ನಾಗಮಂಗಲ ಗಲಾಟೆ ಹಿನ್ನೆಲೆ ಶರಣ್ ಪಂಪ್​​ವೆಲ್ ಈದ್ ಮೆರವಣಿಗೆ ತಡೆಯುವ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಮುಖಂಡರು ಸಾಮಾಜಿಕ ತಾಣಗಳಲ್ಲಿ ಅಡಿಯೋ ಹರಿಬಿಟ್ಟಿದ್ದರು.

Recent Articles

spot_img

Related Stories

Share via
Copy link
Powered by Social Snap