ಕಾಂಗ್ರೆಸ್ ಪಕ್ಷದ ದಾಳಿಯನ್ನು ಖಂಡಿಸಿ ತಾಲ್ಲೂಕು ಬಿಜೆಪಿ ಪ್ರತಿಭಟನೆ

ಹರಪನಹಳ್ಳಿ:

     ಮುಖ್ಯಮಂತ್ರಿ ಕುಮಾರಸ್ವಾಮಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಂಗೆ ಏಳಲು ಕರೆ ನೀಡಿರುವುದು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಡೆಸಿದ ದಾಳಿಯನ್ನು ಖಂಡಿಸಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

     ಪಟ್ಟಣದ ಬಿಜೆಪಿ ಕಛೇರಿಯಿಂದ ಪಕ್ಷದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ಪ್ರವಾಸಿ ಮಂದಿರ ವೃತ್ತಕ್ಕೆ ಆಗಮಿಸಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಹಾಕಿದರು.

     ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ್ ಮಾತನಾಡಿ, ರಾಜ್ಯಕ್ಕೆ ಇಂತಹ ಅಯೋಗ್ಯ ಮುಖ್ಯಮಂತ್ರಿಯಾಗಿರುವುದು ತರವಲ್ಲ. ರಾಜಕೀಯದಲ್ಲಿ ವೈಮನಸ್ಸುಗಳು ಸಾಮಾನ್ಯ. ಆದರೆ ಇನ್ನೊಬ್ಬರನ್ನು ಕೆಣಕಿ ಕಿಡಿ ಹಚ್ಚಿ ದಂಗೆ ಎಬ್ಬಿಸಿದರೆ ಸಾರ್ವಜನಿಕರ ನೆಮ್ಮದಿ ಆಸ್ತಿ ಪಾಸ್ತಿ ನಷ್ಟಕ್ಕೆ ಕಾರಣವಾದರೆ ಯಾರು ಹೊಣೆ. ಇಂತಹ ಗುಂಡಾವರ್ತನೆಯ ಆಡಳಿತ ರಾಜ್ಯದ ಜನತೆಗೆ ಬೇಡ ಶೀಘ್ರದಲ್ಲೇ ಈ ಆಡಳಿತ ಅಂತ್ಯ ಕಾಣಬೇಕು ಎಂದರು.

      ಮುಖಂಡ ಲೋಕೇಶ್ ಮಾತನಾಡಿ, ಕೇವಲ 37 ಶಾಸಕರ ಬಲ ಹೊಂದಿರುವ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ದಂಗೆ ಏಳಿ ಎಂದು ಕರೆ ನೀಡಿದರೆ ಬಿಜೆಪಿ ಪಕ್ಷ 104 ಶಾಸಕರ ಬಲ ಹೊಂದಿದ್ದು ನಮ್ಮ ತಾಕತ್ತು ಏನು ಎಂದು ಅರಿತುಕೊಳ್ಳಬೇಕು. ಕುಮಾರಸ್ವಾಮಿಯವರು ಯಡಿಯೂರಪ್ಪ ಅವರ ಬಗ್ಗೆ ಹಗುರುವಾಗಿ ಮಾತನಾಡುವುದು ಸರಿಯಲ್ಲ. ಅಧಿಕಾರದ ಆಸೆಯಿಂದ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರಾಜಕೀಯ ಮಾಡಬಾರದು. ಬಿಜೆಪಿ ಕಾರ್ಯಕರ್ತರನ್ನು ಕೆಣಕಿದರೆ ತಕ್ಕ ಉತ್ತರ ನೀಡಲು ನಮಗೂ ತಾಕತ್ತಿದೆ ಎಂದರು.

      ಪುರಸಭೆ ಉಪಾಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ಮಹಬೂಬುಸಾಬ್, ಶಿವಶಂಕರ, ಉಮಾಬಾಯಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಈರಣ್ಣ, ಮುಖಂಡರಾದ ಸಣ್ಣ ಹಾಲಪ್ಪ, ರಾಘವೇಂದ್ರಶೆಟ್ಟಿ, ಸಂತೋಷ್, ಲಿಂಬ್ಯಾನಾಯ್ಕ್, ಬಿ.ವೈ.ವೆಂಕಟೇಶ್, ನಾಗರಾಜ, ಕರಿಬಸಪ್ಪ, ಬಂಗಿ ಕೆಂಚಪ್ಪ, ಗಿರೀಶಪ್ಪ ಹಾಗೂ ಇತರರು ಭಾಗವಹಿಸಿದ್ದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link