ಬರಗೂರು :
ಒಂದು ವರ್ಷ ಕಳೆದರೂ ಬರಗೂರಿನಿಂದ ಮದಲೂರುವರೆಗಿನ ರಸ್ತೆ ಕಾಮಗಾರಿಗೆ ಮುಕ್ತಿಯಿಲ್ಲ. ಗ್ರಾಮಸ್ಥರು ಅಧಿಕಾರಿಗಳಲ್ಲಿ ಗೋಗರೆದರೂ ಕಾಮಗಾರಿ ಪ್ರಾರಂಭಿಸಿಲ್ಲ, ಜನರು ರಸ್ತೆ ದೂಳಿನಿಂದ ಕಂಗೆಟ್ಟು ರೋಗ,ರುಜುನೆಗಳನ್ನು ಎದುರಿಸುವ ಭೀತಿ ಎದುರಾಗಿದ್ದು ತುರ್ತಾಗಿ ಕಾಮಗಾರಿ ಪ್ರಾರಂಭಿಸದಿದ್ದರೆ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವುದಾಗಿಯೂ ಹಲವು ಸಂಘಟನೆಗಳು ಹಾಗೂ ಸಾರ್ವಜನಿಕರು ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬರಗೂರಿನಿಂದ ಮದಲೂರು ಮಾರ್ಗವಾಗಿ ಕೈಗೊಂಡಿರುವ ಸುಮಾರು 17.7ಕೋಟಿ ರೂ.ವ್ಯಚ್ಚದಲ್ಲಿ 2020ರ ಜನವರಿಯಲ್ಲಿ ಅಂದಿನ ಶಾಸಕರಾಗಿದ್ದ ದಿ.ಬಿ.ಸತ್ಯನಾರಾಯಣ್ ಶಂಖುಸ್ಥಾಪನೆ ನೆರವೇರಿಸಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು. ಕೊರೊನಾ ಸೋಕು ಹೆಚ್ಚಿದ್ದರ ಹಿನ್ನೆಲೆಯಲ್ಲಿ ಕಾಮಗಾರಿ ಕುಂಟಿತಗೊಂಡಿತ್ತು. ನಂತರ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆದು ತಿಂಗಳುಗಳು ಕಳೆದರೂ, ಕೊರೋನಾ ಸೊಂಕು ಕಡಿಮೆಯಾದರೂ, ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು 1ವರ್ಷ ಕಳೆಯುತ್ತಿದ್ದರೂ ಸಹ ತಾಲೂಕಿನ ಚುನಾಯಿತ ಶಾಸಕರಾಗಲೀ, ಜನಪ್ರತಿನಿದಿಗಳಾಗಲೀ, ಅಧಿಕಾರಿಗಳಾಗಲೀ ರಸ್ತೆ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇಕೆ ಎಂಬುದು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ಬರಗೂರಿನ ಈ ರಸ್ತೆ ಆಂದ್ರ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಪ್ರತಿ ದಿನವೂ ಬೆಳಗಾಯಿತೆಂದರೆ ಬಸ್ಸುಗಳು, ಲಾರಿಗಳು, ಕಾರುಗಳು, ದ್ವಿಚಕ್ರವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಹಾದು ಹೋಗುತ್ತವೆ. ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಮೇಲೆದ್ದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ವಾಹನ ಸವಾರರು ಸಂಚರಿಸಲು ಆಗದೆ ತೀರ್ವ ರೀತಿಯಲ್ಲಿ ತೊಂದರೆ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯ ಸುತ್ತಮುತ್ತಲ ಪ್ರದೇಶದಲ್ಲಿ ಹಲವಾರು ಶಾಲೆಗಳಿವೆ. ಇತ್ತೀಚೆಗೆ ಶಾಲೆಗಳು ಪ್ರಾರಂಭವಾಗಿದ್ದು ಈ ರಸ್ತೆಯ ಮೂಲಕವೇ ಸಂಚರಿಸುವ ಮಕ್ಕಳು ವಾಹನಗಳ ಓಡಾಟದಿಂದ ರಸ್ತೆಯಿಂದ ಮೇಲೆದ್ದ ಧೂಳು ಕುಡಿದು ರೋಗ, ರುಜುನೆಗಳು ಹರಡುವ ಭೀತಿ ಎದುರಾಗಿದೆ.
ಇತ್ತಿಚೆಗಷ್ಟೇ ಕೊರೊನ ಸೊಂಕು ರೋಗ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ ಈ ಭಾಗದಲ್ಲಿ ಸಾಂಕ್ರಾಮಿಕ ರೋಗಗಳಿ ಹರಡುವ ಜೊತೆಗೆ ಮತ್ತೆ ಕೊರೊನಾ ಒಕ್ಕರಿಸುವುದರಲ್ಲಿ ಸಂಶಯವೇ ಇಲ್ಲ. ಈ ಬಗ್ಗೆ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ವಾಸ್ತವಾಂಶ ಪರಿಶೀಲನೆ ಮಾಡಿ ಸರ್ಕಾರದ ಅಧಿಕಾರಿಗಳಿಗೆ ತಾಕೀತು ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ರಸ್ತೆ ದುರಸ್ತಿ ಮಾಡುವಬಗ್ಗೆ ಈಗಾಗಲೇ ಹಲವು ಜನಪ್ರತಿನಿದಿಗಳು ಹಾಗೂ ಗ್ರಾಮದ ಮುಖಂಡರುಗಳು ಮುಖ್ಯ ಸಹಾಯಕ ಎಂಜಿನಿಯರ್‍ಗೆ ದೂರವಾಣಿ ಕರೆ ಮಾಡಿ ಎಚ್ಚರಿಸಿದ್ದರೂ ನಯಾ ಪೈಸೆಯ ಕಿಮ್ಮತ್ತು ನೀಡದೆ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿಯಾಗಿದೆ. ಇತ್ತೀಚೆಗೆ ಶಿರಾ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದು ಕೇಂದ್ರ,ರಾಜ್ಯ,ಹಾಗೂ ತಾಲೂಕಿನಲ್ಲಿ ಒಂದೇ ಸರ್ಕಾರ ಆಡಳಿತವಿದ್ದರು ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿರುವುದು ಅನುಮಾನಾಸ್ಪದವಾಗಿದೆ.
ಸಂಘಟನೆಗಳಿಂದ ಪ್ರತಿಭಟನೆ:
15 ದಿನಗಳಲ್ಲಿ ತುರ್ತಾಗಿ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಕನ್ನಡಪರ ಸಂಘಟನೆಗಳು,ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರು ಒಕ್ಕೊರಲಿನಿಂದ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಶಾಸಕ ಡಾ.ರಾಜೇಶ್‍ಗೌಡ:
ರಸ್ತೆ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೊಮ್ಮೆ ಸಂಬಂದಪಟ್ಟವರ ಗಮನಕ್ಕೆ ತಂದು ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಎಚ್ಚರಿಸಲಾಗುವುದೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ