ಚಿತ್ರದುರ್ಗ
ಚಿತ್ರದುರ್ಗ ನಗರ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿ ಘಟನೆ ನಡೆದಿದೆ. ಪಿಎಸ್ಐ ಗಾದಿಲಿಂಗಪ್ಪ ಅವರ ಕೈ ಬೆರಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತುರುವನೂರು ರಸ್ತೆಯ ಖಾಸಗಿ ಹೋಟೆಲ್ ಬಳಿ ತಡರಾತ್ರಿ ರಸ್ತೆ ಮೇಲೆ ತುಮಕೂರು ಜಿಲ್ಲೆ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಗುಂಪಾಗಿ ನಿಂತಿದ್ದನ್ನು ಪಿಎಸ್ಐ ಗಾದಿಲಿಂಗಪ್ಪ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಎಸ್ಐ ಗಾದಿಲಿಂಗಪ್ಪ ಅವರ ಮೇಲೆ ಹಲ್ಲೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಹನುಮಂತೇಗೌಡ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ, “ಪೊಲೀಸರಿಂದಲೇ ನನ್ನ ಮೇಲೆ ಹಲ್ಲೆ ನಡೆದಿದೆ” ಎಂದು ಹನುಮಂತೇಗೌಡ ಪ್ರತಿ ಆರೋಪ ಮಾಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಎದೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರದುರ್ಗ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆ ಸಂಬಂಧ ಬಿಜೆಪಿ ಜಿಲ್ಲಾ ಅಧ್ಯಕ್ಷ ಹನುಮಂತೇಗೌಡರ ಕಾರು ಚಾಲಕ, ಪ್ರತ್ಯಕ್ಷದರ್ಶಿ ರಂಗಸ್ವಾಮಿ ಮಾತನಾಡಿ, ಶುಕ್ರವಾರ (ಮಾ.14) ರಾತ್ರಿ 11:30ರ ಸುಮಾರಿಗೆ ಘಟನೆ ನಡೆದಿದೆ. ಖಾಸಗಿ ಹೋಟೆಲ್ನಲ್ಲಿ ಊಟ ಮಾಡಿ ಹೊರಡಲು ನಿಂತಿದ್ದೆವು. ಹನುಮಂತೇಗೌಡರ ಜತೆಗೆ ಇಬ್ಬರು ಸ್ನೇಹಿತರು ಇದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಗಾದಿಲಿಂಗಪ್ಪ ಅವರು “ರಾತ್ರಿ ಇಷ್ಟೊತ್ತಾದರೂ ಏಕೆ ನಿಂತಿದ್ದೀರೋ ಎಂದು ಪ್ರಶ್ನಿಸಿದರು. ಸರ್ ಹೊರಡುತ್ತಿದ್ದೇವೆ ಎಂದರೂ ಏಕವಚನದಲ್ಲೇ ಗದರಿದರು.
ನಾನು ಬಿಜೆಪಿ ಜಿಲ್ಲಾದ್ಯಕ್ಷ, ಗೌರವಯುತವಾಗಿ ಮಾತಾಡಿ ಎಂದು ಹನುಮಂತೇಗೌಡ ಹೇಳಿದರು. ಆದರೂ, ಪಿಎಸ್ಐ ಗಾದಿಲಿಂಗಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಗ ನೂಕಾಟ ತಳ್ಳಾಟ ನಡೆಯಿತು, ಪಿಎಸ್ಐ ಹಲ್ಲೆ ಮಾಡಿದರು. ಪಿಎಸ್ಐ ಮೇಲೆ ಹನುಮಂತೇಗೌಡ ಹಲ್ಲೆ ಮಾಡಿಲ್ಲ. ಎದೆನೋವು ಕಾರಣಕ್ಕೆ ಹನುಮಂತೇಗೌಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ” ಎಂದು ಹೇಳಿದರು.
