ಬೆಂಗಳೂರು :
ಆಗಸ್ಟ್ ಮತ್ತು ಸೆಪ್ಟಂಬರ್ 2021ರಲ್ಲಿ ನಡೆದ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ ನಾಗೇಶ್ ಸೋಮವಾರ (ಸೆ.20) ವಿಧಾನಸೌಧದ ಕಚೇರಿಯಲ್ಲಿ ಪ್ರಕಟಿಸಿದರು.
‘ಆ.19ರಿಂದ ಸೆ.3ರವರೆಗೆ 187 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿ.ಯು ಪರೀಕ್ಷೆ ನಡೆಸಲಾಗಿದೆ. ಒಟ್ಟು 18,413 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 5,507 ಅಭ್ಯರ್ಥಿಗಳು (ಶೇ.29.91) ತೇರ್ಗಡೆಗೊಂಡಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರಗಳನ್ನು ಸಚಿವರು ನೀಡಿದರು.
ನಾಲ್ಕು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗಿದೆ. ಪಿ.ಯು ಮಂಡಳಿಯಿಂದ ನೀಡಲಾಗಿದ್ದ ಫಲಿತಾಂಶವನ್ನು ತಿರಸ್ಕರಿಸಿ 592 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 556 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. 36 ಅಭ್ಯರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ.
ಪುನರಾವರ್ತಿತ 351 ಅಭ್ಯರ್ಥಿಗಳ ಪೈಕಿ 183 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. 168 ಅಭ್ಯರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. 17,470 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 4,768 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆ ರದ್ದುಗೊಳಿಸಿದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಆಧಾರದ ಮೇಲೆ ಅಂಕ ನೀಡಿ ತೇರ್ಗಡೆಗೊಳಿಸಲಾಗಿತ್ತು. ಫಲಿತಾಂಶ ತೃಪ್ತಿಕರವಾಗಿಲ್ಲ ಎನ್ನುವ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು.
ಕಲಾ ವಿಭಾಗದಲ್ಲಿ ಶೇ.32.06ರಷ್ಟು ಅಭ್ಯರ್ಥಿಗಳು, ವಾಣಿಜ್ಯ ವಿಭಾಗದಲ್ಲಿ ಶೇ.24.98 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.70.83ರಷ್ಟು ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ. ತೇರ್ಗಡೆಗೊಂಡವರಲ್ಲಿ ಬಾಲಕಿಯರ ಪ್ರಮಾಣ ಶೇ.36.72ರಷ್ಟು ಇದೆ. ಬಾಲಕರ ತೇರ್ಗಡೆ ಪ್ರಮಾಣ ಶೇ.26.02ರಷ್ಟು ಇದೆ.
ಗ್ರಾಮಾಂತರ ಪ್ರದೇಶದ ಶೇ.32.59 ಅಭ್ಯರ್ಥಿಗಳು ಮತ್ತು ನಗರ ಪ್ರದೇಶದ ಶೇ.28.62ರಷ್ಟು ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ತೆಗೆದುಕೊಂಡ ಶೇ.31.72ರಷ್ಟು ಅಭ್ಯರ್ಥಿಗಳು ಮತ್ತು ಇಂಗ್ಲೀಷ್ನಲ್ಲಿ ಪರೀಕ್ಷೆ ತೆಗೆದುಕೊಂಡ ಶೇ.26.08ರಷ್ಟು ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಕಲಾ ಸಂಯೋಜನೆಯಲ್ಲಿ ಗರಿಷ್ಠ 592 ಅಂಕ ಸಾಧನೆ ಮಾಡಲಾಗಿದೆ. ವಾಣಿಜ್ಯ ಸಂಯೋಜನೆಯಲ್ಲಿ ಗರಿಷ್ಠ 594 ಅಂಕ ಮತ್ತು ವಿಜ್ಞಾನ ಸಂಯೋಜನೆಯಲ್ಲಿ ಗರಿಷ್ಠ 568 ಅಂಕ ಗಳಿಸಲಾಗಿದೆ.
ಉನ್ನತ ಶ್ರೇಣಿಯಲ್ಲಿ (ಶೇ.85ಕ್ಕಿಂತ ಹೆಚ್ಚು ಅಂಕ) 580 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 1,939, ದ್ವಿತೀಯ ದರ್ಜೆ 1,578 ಮತ್ತು ಶೇ.50ಕ್ಕಿಂತ ಕಡಿಮೆ ಅಂಕಗಳೊಂದಿಗೆ 1,410 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
‘ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಮತ್ತು ಮರುಮೌಲ್ಯಮಾಪನಕ್ಕೆ ಸೆ.20ರಿಂದ ಸೆ.25ರವರೆಗೆ ಅವಕಾಶವಿದೆ. ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬಹುದು’ ಎಂದು ಸಚಿವ ನಾಗೇಶ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ