ಪುನೀತ್‍ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ

ಬೆಂಗಳೂರು:

ಅಕಾಲಿಕವಾಗಿ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್‍ಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ ದೀಪ ನಮನ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಡಳಿತ ಪಕ್ಷದ ಸಚಿವರುಗಳು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು.

ಸಚಿವರು, ಶಾಸಕರು ಸೇರಿದಂತೆ ಗಣ್ಯಾತಿಗಣ್ಯರು ಮೇಣದ ಬತ್ತಿ ಬೆಳಗಿ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಚಿತ್ರ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ರಚನೆಯ ಮುತ್ತುರಾಜ ಹೆತ್ತ ಮುತ್ತೆ ಎತ್ತ ಹೋದೆಯೊ ಎಂಬ ಹೃದಯ ತಟ್ಟುವ ಗೀತೆ ಹಿನ್ನೆಲೆಯಲ್ಲಿ ಮೂಡಿ ಬಂದಾಗ ನಟ ಶಿವರಾಜ್ ಕುಮಾರ್ ಅಗಲಿದ ಸೋದರನನ್ನು ನೆನೆದು ಕಣ್ಣೀರಾದರು. ದಕ್ಷಿಣ ಭಾರತದ ಚಿತ್ರೋದ್ಯಮದ ಗಣ್ಯರು ಪಾಲ್ಗೊಂಡಿದ್ದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನೀತ್‍ಗೆ ಮರಣೋತ್ತರ ಕರ್ನಾಟಕ ರತ್ನ ಘೋಷಿಸಿದರು. ರಾಜಕುಮಾರ್‍ರಂತೆ ಪುನೀತ್‍ಗೂ ಸ್ಮಾರಕ ನಿರ್ಮಿಸುವುದಾಗಿ ಹೇಳಿದರು. ಪುನೀತ್ ಅತ್ಯುತ್ತಮ ಚಾರಿತ್ರ್ಯದ ಕಾರಣ ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ. ಅವರಂತೆ ವಿನಯ, ವಿಧೇಯತೆಯನ್ನು ರೂಢಿಸಿಕೊಂಡವರು ಕಡಿಮೆ. ಕೇವಲ ಕರ್ನಾಟಕ ರತ್ನ ಮಾತ್ರವಲ್ಲದೆ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೂ ಅಪ್ಪು ಭಾಜನರಾಗುವ ಬಗ್ಗೆ ಚಿಂತನೆ ನಡೆಸಲಾಗುವುದು. ಡಾ ರಾಜ್ ಕುಮಾರ್ ಸ್ಮಾರಕದಂತೆ ಪುನೀತ್ ಸ್ಮಾರಕವನ್ನೂ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಸಿದ್ದರಾಮಯ್ಯ ಮಾತನಾಡಿ, ಪುನಿತ್ ರಾಜ್ ಕುಮಾರ್ ಅವರ ಒಡನಾಟವನ್ನು ಸ್ಮರಿಸಿದರು. ಮೈಸೂರಿನ ಶಕ್ತಿಧಾಮದಲ್ಲಿನ ಸಾಮಾಜಿಕ ಚಟುವಟಿಕೆಗಳನ್ನು ಕೊಂಡಾಡಿದರು.

ನಟ ವಿಶಾಲ್ ಮೊದಲಿಗೆ ಕನ್ನಡದಲ್ಲಿ ಮಾತನಾಡಿ, ಶಕ್ತಿಧಾಮದ ಮಕ್ಕಳಿಗೆ ವಿದ್ಯಾಭ್ಯಾಸದ ಖರ್ಚು ವೆಚ್ಚ ನೋಡಿಕೊಳ್ಳುತ್ತೇನೆ. ಇದನ್ನು ದುರಹಂಕಾರದಿಂದ ಹೇಳುತ್ತಿಲ್ಲ. ನಾನು ಮನೆ ಖರೀದಿಸಲು ತೀರ್ಮಾನಿಸಿದ್ದೆ. ಆದರೆ ಈ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತೇನೆ. ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ನನ್ನ ಜನ್ಮದಿನದಂದು ಪುನೀತ್ ರಾಜ್ ಕುಮಾರ್ ಮೃತಪಟ್ಟಿದ್ದು, ಇದು ತಮಗೆ ಅತೀವ ದುಃಖ ತರಿಸಿದೆ ಎಂದರು.

ಕಿರುಚಿತ್ರ ಪ್ರದರ್ಶನ: ಕಿಚ್ಚನ ಹಿನ್ನೆಲೆ ದನಿ :

ದಿಢೀರನೆ ಕಣ್ಮರೆಯಾದ ಚಂದನವನದ ನಕ್ಷತ್ರ ಅಪ್ಪು ಸ್ಮರಣೆಗಾಗಿ ಹಮ್ಮಿಕೊಂಡಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ, ಅವರ ಅಭಿನಯದ ಚಿತ್ರಗಳ ಮಾಹಿತಿ, ಸಮಾಜ ಮುಖಿ ಚಟುವಟಿಕೆ, ಸಹಾಯದ ಬಗ್ಗೆ ಕಿರುಚಿತ್ರವೊಂದನ್ನು ಪ್ರದರ್ಶಿಸಲಾಗಿದ್ದು, ಕಿಚ್ಚ ಸುದೀಪ್ ಹಿನ್ನೆಲೆ ದನಿ ದಾನದ ಮೂಲಕ ಗೆಳೆಯನಿಗೆ ನಮನ ಸಲ್ಲಿಸಿದ್ದಾರೆ.

ಪುನೀತ್ ಸೇವಾಕಾರ್ಯಗಳು, ಸಂಕಷ್ಟದಲ್ಲಿದ್ದವರಿಗೆ ನೆರವು, ಎಲ್ಲರೊಡನೆ ಗೌರವದಿಂದ ವರ್ತಿಸುತ್ತಿದ್ದ ರೀತಿಯನ್ನು ಕಿರುಚಿತ್ರದಲ್ಲಿ ಹೇಳಲಾಗಿದೆ. ಪ್ರೇಮದ ಕಾಣಿಕೆ ಚಿತ್ರದಲ್ಲಿ ಬಾಲನಟನಿಂದ ಆರಂಭವಾಗಿ ನಾಯಕ ನಟನಾಗಿ, ನಿರ್ಮಾಪಕನಾಗಿ ಸ್ಯಾಂಡಲ್ ವುಡ್‍ಗೆ ನೀಡಿದ ಕೊಡುಗೆ, ಅನಾಥಾಶ್ರಮ, ಶಕ್ತಿಧಾಮ, ಗೋಶಾಲೆಗಳ ನಿರ್ವಹಣೆ ಸೇರಿದಂತೆ ಪುನೀತ್ ಜೀವನ ಚಿತ್ರಣವನ್ನು ಕಿರುಚಿತ್ರದಲ್ಲಿ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap