ಬೆಂಗಳೂರು/ತುಮಕೂರು :
ಕನ್ನಡ ಚಿತ್ರರಂಗದ ಖ್ಯಾತನಟ ಪುನೀತ್ ರಾಜ್ ಕುಮಾರ್(46) ಶುಕ್ರವಾರ ತೀವ್ರ ಹೃದಯಘಾತದಿಂದ ಹಠಾತ್ ನಿಧನರಾಗಿದ್ದು, ಇಡೀ ಕರುನಾಡೇ ಕಂಬನಿ ಮಿಡಿದಿದೆ.
ವರನಟ ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ದಂಪತಿಯ ಕಿರಿಯ ಪುತ್ರರಾಗಿದ್ದ ಪುನಿತ್ ರಾಜ್ ಕುಮಾರ್, ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಇಬ್ಬರು ಸಹೋದರಿಯರು, ಪತ್ನಿ ಅಶ್ವಿನಿ ರೇವಂತ್, ಪುತ್ರಿಯರಾದ ದ್ರಿತಿ ಮತ್ತು ವಂದಿತಾ ಸೇರಿದಂತೆ ಕೋಟ್ಯಾಂತರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.
ಸದಾ ಲವಲವಿಕೆಯಿಂದ ಇರುತ್ತಿದ್ದ ಪುನಿತ್ ರಾಜ್ ಕುಮಾರ್, ಶುಕ್ರವಾರ ಬೆಳಿಗ್ಗೆ ಜಿಮ್ ನಲ್ಲಿ ವರ್ಕ್ ಔಟ್ ಮಾಡಿದ ನಂತರ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬ ವೈದ್ಯರಾದ ರಮಣಶ್ರೀ ಕ್ಲಿನಿಕ್ ಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ. ಬಳಿಕ ವಿಕ್ರಂ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತಾದರೂ ಆ ವೇಳೆಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಆಸ್ಪತ್ರೆಯಿಂದ ಸದಾಶಿವನಗರ ಮನೆಗೆ ಪಾರ್ಥೀವ ಶರೀರವನ್ನು ಕರೆತಂದು ಕುಟುಂಬಸ್ಥರ ಸಮ್ಮುಖದಲ್ಲಿ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಿ, ಸಾರ್ವಜನಿಕರು ಅಭಿಮಾನಿಗಳ ದರ್ಶನಕ್ಕಾಗಿ ಕಂಠೀರವ ಸ್ಟೇಡಿಯಂಗೆ ಕೊಂಡೊಯ್ಯಲಾಯಿತು. ಮಾರ್ಗಮಧ್ಯೆ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿ ಕಣ್ಣೀರ ಕೋಡಿ ಹರಿಸಿದರು. ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ಅಪ್ಪ-ಅಮ್ಮನ ಸಮಾಧಿ ಬಳಿಯೇ ಪುನೀತ್ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ಪೊಲೀಸ್ ಗೌರವ ಸಲ್ಲಿಸಲು ಸರಕಾರ ಅಧಿಸೂಚಿಸಿದೆ.
ಗಣ್ಯರ ಸಂತಾಪ:
ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ, ಸಿದ್ಧಗಂಗಾ, ಸುತ್ತೂರು, ಆದಿಚುಂಚನಗಿರಿ ಶ್ರೀಗಳು. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರಾದಿಯಾಗಿ ರಾಜಕೀಯ ಕ್ಷೇತ್ರದ ಹಲವು ಗಣ್ಯರು, ಅಮಿತಾಬ್‍ಬಚ್ಚನ್, ರಜನಿಕಾಂತ್, ಕಮಲಹಾಸನ್ ಸೇರಿ ಬಾಲಿವಾಡ್, ಸ್ಯಾಂಡಲ್‍ವುಡ್, ಟಾಲಿವುಡ್, ಕಾಲಿವುಡ್ ಸೇರಿ ಇಡೀ ಭಾರತ ಚಿತ್ರರಂಗದ ಖ್ಯಾತನಾಮರೆಲ್ಲ ರಾಜರತ್ನದ ಅಗಲಿಕೆಗೆ ಸಂತಾಪ ಸೂಚಿಸಿ ಅವರ ಬಹುಮುಖಿ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.
ಚಿತ್ರ ಪ್ರದರ್ಶನ ರದ್ದು:
ಹೊಸದಾಗಿ ರಿಲೀಸ್ ಆಗಿದ್ದ ಭಜರಂಗಿ -2 ಚಲನಚಿತ್ರ ಸೇರಿ ಹಲವು ಚಲನಚಿತ್ರ ಪ್ರದರ್ಶನವನ್ನು ನಾಯಕನಟನ ನಿಧನದ ಗೌರವಾರ್ಥ ರದ್ದು ಮಾಡಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಅಂಗಡಿ ಮುಂಗಟ್ಟಗಳನ್ನು ವರ್ತಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಸಂತಾಪಸೂಚಿಸಿದರು. ತುಮಕೂರಿನ ವಿವಿಧೆಡೆಯೂ ಪುನೀತ್ ಅವರ ಭಾವಚಿತ್ರದ ಫ್ಲೆಕ್ಸ್‍ಗಳನ್ನು ಹಾಕಿ ಅಗಲಿದ ಮೇರುನಟನಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಯುವ ಜನರ ಐಕಾನ್:
46 ವರ್ಷದ ಪುನಿತ್ ರಾಜ್ ಕುಮಾರ್ ಯುವ ಜನಾಂಗದ ಐಕಾನ್ ಆಗಿ ಹೊರಹೊಮ್ಮಿದ್ದರು. ಅವರಿಗೆ ನಿನ್ನೆ ರಾತ್ರಿಯೇ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿತ್ತು. ಆದರೂ ಅವರು ಬೆಳಗ್ಗೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡಿದ್ದಾರೆ. ಅರೋಗ್ಯದಲ್ಲಿ ತುಸು ಏರುಪೇರು ಕಾಣಿಸಿಕೊಂಡಾಗಲೂ ಜಿಮ್ ನಲ್ಲಿ ವರ್ಕ್ ಔಟ್ ಮಾಡಿದ್ದೇ ಅವರ ಆರೋಗ್ಯ ಬಿಗಡಾಯಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಪುನೀತ್ ರಾಜ್ ಕುಮಾರ್ ಮನೆಯಲ್ಲಿರಲಿ, ಶೂಟಿಂಗ್ ನಲ್ಲಿರಲಿ, ಪ್ರವಾಸದಲ್ಲಿರಲಿ ಎಂದಿಗೂ ವ್ಯಾಯಾಮ ತಪ್ಪಿಸುತ್ತಿರಲಿಲ್ಲ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜಿಮ್ ಗಳು ಬಾಗಿಲು ಹಾಕಿದ್ದರೂ ಕೂಡ ಮನೆಯಲ್ಲಿಯೇ ಇರುವ ಸುಸಜ್ಜಿತ ವ್ಯಾಯಾಮಶಾಲೆಯಲ್ಲಿ ಅವರು ವರ್ಕ್ ಔಟ್ ಮಾಡುತ್ತಿದ್ದರು.
ಸಮರಕಲೆ ಪ್ರವೀಣ:
ಪುನೀತ್ ಅವರು ಸಮರಕಲೆಗಳನ್ನು ಕಲಿತವರು. ಇದರಿಂದಾಗಿ ಅವರ ಆರೋಗ್ಯ, ಮೈಕಟ್ಟು ಅತ್ಯುತ್ತಮವಾಗಿತ್ತು. ಸದಾ ಲವಲವಿಕೆಯಿಂದ ಇರುತ್ತಿದ್ದರು. ಇದರ ಗುಟ್ಟು ಅವರು ನಿತ್ಯ ಅನುಸರಿಸುತ್ತಿದ್ದ ವ್ಯಾಯಾಮಶೈಲಿಯೇ ಕಾರಣವಾಗಿತ್ತು. ಇವರು ವ್ಯಾಯಾಮ ಮಾಡುತ್ತಿರುವ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಬಾಲನಟ, ನಾಯಕನಟನಾಗಿ ಜನಮನ ಗೆದಿದ್ದ ಅಪ್ಪು..!
ಲವಲವಿಕೆಯ ವ್ಯಕ್ತಿತ್ವ, ಸದಾ ನಗೆಸೂಸುವ ಮುಖ, ಎಲ್ಲರೊಡನೆ ಬೆರೆಯುವ ಆತ್ಮೀಯತೆ, ಮುಗ್ದತೆ ತುಂಬಿದ ಅದ್ಭುತ ನಟ ಪುನೀತ್ ರಾಜ್ ಕುಮಾರ್. ಇವರ ಅಕಾಲಿಕ ಮರಣದ ಆಘಾತವನ್ನು ಅರಗಿಸಿಕೊಳ್ಳಲು ಸ್ಯಾಂಡಲ್ ವುಡ್ ಗೆ ಸದ್ಯಕ್ಕೆ ಸಾಧ್ಯವಿಲ್ಲ. ಮೇರು ಪ್ರತಿಭೆ ರಾಜ್ ಕುಮಾರ್ ಪುತ್ರನಾಗಿ ಮಾತ್ರವಲ್ಲದೆ ಸ್ವಂತ ಪ್ರತಿಭೆಯಿಂದ ಬಾಲನಟನಾಗಿ ಚಂದನವನಕ್ಕೆ ಪದಾರ್ಪಣೆ ಮಾಡಿ, ಒಟ್ಟು 49 ಚಿತ್ರಗಳಲ್ಲಿ ನಟಿಸಿ ಎಲ್ಲರ ಮನಗೆದ್ದವರು.
ಪುಟ್ಟ ಮಗುವಾಗಿದ್ದಾಗಿನಿಂದಲೇ ಬೆಳ್ಳಿತೆರೆ ಪ್ರವೇಶಿಸಿ ಮಾಸ್ಟರ್ ಲೋಹಿತ್ ಹೆಸರಿನಿಂದ ಬಾಲನಟನಾಗಿ 28 ಚಿತ್ರಗಳಲ್ಲಿ ಮಿಂಚಿ ಮೆರೆದು, ಪುನೀತ್ ಹೆಸರಿನಲ್ಲಿ 29 ಚಿತ್ರಗಳಲ್ಲಿ ನಾಯಕನಟನಾಗಿ ಜನಪ್ರಿಯತೆ ಪಡೆದರು. ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೆ, ತಂದೆಯ ಹೆಸರನ್ನು ಸಾರ್ಥಕಗೊಳಸುವಂತ ನಡೆ, ನುಡಿಯನ್ನು ಹೊಂದಿದ್ದರು.ನಟನೆ ಮಾತ್ರವಲ್ಲದೆ ಗಾಯಕನಾಗಿ, ನಿರೂಪಕನಾಗಿ ಗುರುತಿಸಿಕೊಂಡವರು. ‘ಚಲಿಸುವ ಮೋಡಗಳು’ ಚಿತ್ರದ ಕಾಣದಂತೆ ಮಾಯವಾದನು, ಭಾಗ್ಯವಂತ ಚಿತ್ರದ ಅಮ್ಮ ಸೀತಮ್ಮ ತಂದೆ ಶ್ರೀರಾಮ ಹಾಡನ್ನು ಎಂದಿಗೂ ಮರೆಯುವಂತೆಯೇ ಇಲ್ಲ.
ಪ್ರಸ್ತುತ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾದ ಕೆಲಸಗಳತ್ತ ಗಮನ ಹರಿಸಿದ್ದ ಅಪ್ಪು, ಪವನ್‍ಕುಮಾರ್ ನಿರ್ದೇಶನದ ‘ದ್ವಿತ್ವ’ ಚಿತ್ರದಲ್ಲೂ ನಟಿಸುತ್ತಿದ್ದರು. ಆದರೆ ಹಠಾತ್ ನಿಧನ ಎಲ್ಲರೂ ಕಂಗೆಡುವಂತೆ ಮಾಡಿದೆ.
ಬೆಳ್ಳಿತೆರೆಯಲ್ಲಿ ಪುನೀತ್ ಹೆಜ್ಜೆಗುರುತು…
ಡಾ. ರಾಜ್ ಕುಮಾರ್ ಹಾಕಿಕೊಟ್ಟ ಮಾರ್ಗವನ್ನು ಚಾಚೂ ತಪ್ಪದೇ ಪಾಲಿಸಿಕೊಂಡುಬಂದವರು ಪುನೀತ್ ರಾಜ್‍ಕುಮಾರ್ ಇಂದು ಯಾರೂ ನಿರೀಕ್ಷಿಸದ ಅಘಾತವನ್ನು ಉಂಟು ಮಾಡಿ ಇಹಲೋಕ ತ್ಯಜಿಸಿದ್ದಾರೆ. ನಟ, ಹಿನ್ನೆಲೆ ಗಾಯಕ ಮತ್ತು ನಿರೂಪಕರಾಗಿ ತಮ್ಮದೇ ಚಾಪು ಮೂಡಿಸಿದ್ದರು. ಪುನೀತ್ ಈವರೆಗೆ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಬಾಲ್ಯದಲ್ಲಿ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ ನಟನಾಗಿ ವಸಂತ ಗೀತ(1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು(1983) ಮತ್ತು ಬೆಟ್ಟದ ಹೂವು(1985) ಚಿತ್ರಗಳಲ್ಲಿ ನಟಿಸಿ ತಮ್ಮ ನಟನೆಗೆ ನಾಡಿನ ಅಭಿಮಾನಿಗಳಿಂದ ಅಪಾರ ಬೆಂಬಲ ಗಳಿಸಿದ್ದರು.
ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಪುನೀತ್ ಅವರು ಮೊದಲ ಬಾರಿಗೆ 2002 ರಲ್ಲಿ ಅಪ್ಪು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ್ದರು. ನಂತರ ಕರ್ನಾಟಕದ ತುಂಬೆಲ್ಲಾ ಅಪ್ಪು ಎಂದು ಪರಿಚಿತರಾದರು. ಅವರು ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಹಲವಾರು ಯಶಸ್ವಿ ಚಲನಚಿತ್ರಗಳು ನೀಡಿದ್ದಾರೆ.
ಪ್ರಮುಖ ವಿಷಯ ಎಂದರೆ ಕೇವಲ ತಾನು ನಟನೆಗಷ್ಟೇ ಸೀಮಿತವಲ್ಲ ಎಂಬುದನ್ನು ತೋರಿಸಲು ಕನ್ನಡದ ಕೋಟ್ಯಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಕೂಡ ಮಾಡಿದ್ದಾರೆ.
ಸಾವಿನಲ್ಲೂ ಸಾರ್ಥಕತೆ, ಸಿದ್ಧಗಂಗಾ ಮಠ, ತಿಪಟೂರಿಗೆ ಭೇಟಿಯ ನೆನಪು
ಡಾ. ರಾಜ್‍ಕುಮಾರ್ ಅಭಿನಯದ ಮಯೂರ ಚಿತ್ರೀಕರಣದ ಸಂದರ್ಭದಲ್ಲಿ ಮದ್ರಾಸ್‍ನಲ್ಲಿ 17 ಮಾರ್ಚ್ 1975ರಲ್ಲಿ ಜನಿಸಿದ್ದ ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿತ್ತು. ಪಾರ್ವತಮ್ಮ ಪ್ರೀತಿಯ ಅಪ್ಪುನನ್ನು ಬಾಲ್ಯದಲ್ಲಿ ಚಲನಚಿತ್ರದ ಸೆಟ್‍ಗೆ ತಪ್ಪದೇ ಕರೆದುಕೊಂಡು ಹೋಗುತ್ತಿದ್ದರು.
ಪ್ರೀತಿಸಿ ಮದುವೆಯಾಗಿದ್ದ ಮಡದಿ, ಇಬ್ಬರು ಹೆಣ್ಣುಮಕ್ಕಳ ಸುಖೀ ಸಂಸಾರ ಸಾಗಿಸುತ್ತಿದ್ದ ಪುನೀತ್ ರಾಜ್‍ಕುಮಾರ್, ಅನೇಕ ಅನಾಥಶ್ರಮ, ಶಾಲೆಗಳಿಗೆ ಉದಾರ ಕೊಡುಗೆಗಳನ್ನು ನೀಡಿದ್ದಾರೆ. ಯುವರತ್ನ ಚಿತ್ರದ ಪ್ರಮೋಷನ್‍ಗಾಗಿ ತುಮಕೂರಿಗೆ ಭೇಟಿಕೊಟ್ಟ ಸಂದರ್ಭದಲ್ಲಿ ಸಿದ್ಧಗಂಗಾ ಮಠ, ಎಸ್‍ಐಟಿಗೆ ಭೇಟಿಕೊಟ್ಟಿದ್ದ ಪುನೀತ್ ರಾಜ್‍ಕುಮಾರ್ ಅವರು ಹಿರಿಯ ಶ್ರೀಗಳ ಗದ್ದುಗೆಗೆ ನಮಿಸಿದ್ದರು. ಡಾ.ರಾಜ್‍ಕುಮಾರ್ ಅವರ ಬಾಲ್ಯದ ಗೆಳೆಯ ತಿಪಟೂರಿನ ರಾಮಸ್ವಾಮಿ ಅವರ ಮನೆಗೂ ಭೇಟಿಕೊಡುತ್ತಿದ್ದ ಪುನೀತ್ ಅವರು ದಸರೀಘಟ್ಟದ ಚೌಡೇಶ್ವರಿ ಕ್ಷೇತ್ರಕ್ಕೂ ಆಗಮಿಸಿದ್ದು ಈಗ ಬರೀ ನೆನಪು. ಪುನೀತ್‍ರಾಜ್‍ಕುಮಾರ್ ಅವರ ಎರಡು ಕಣ್ಣುಗಳನ್ನು ಅವರ ಇಚ್ಚೆಯಂತೆ ಕುಟುಂಬಸ್ಥರು ದಾನ ಮಾಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರು ಹೃದಯಘಾತದಿಂದ ಮೃತಪಟ್ಟಿರುವುದು ತಿಳಿದು ಬಹಳ ದುಃಖವಾಯಿತು. ಶ್ರೀಯುತರು ಕನ್ನಡ ಚಿತ್ರರಂಗಕ್ಕೆ, ಕನ್ನಡ ನಾಡು ನುಡಿಗೆ ಅಪಾರ ಸೇವೆ ಸಲ್ಲಿಸದ ಕೀರ್ತಿಗೆ ಭಾಜನರಾಗಿದ್ದಾರೆ. ಚಿಕ್ಕವಯಸ್ಸಿನಿಂದಲೇ ನಾಟಕ, ಚಲನಚಿತ್ರಗಳಲ್ಲಿ ನಟಿಸಿ ಅಪರಾ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅತ್ಯಂತ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿತ್ವವುಳ್ಳವರಾಗಿದ್ದರಿಂದ ಅನೇಕ ಅನಾಥಶ್ರ, ಶಾಳೆಗಳು ಶಿಕ್ಷಣಕ್ಕೆ ಉತ್ತಮಕೊಡುಗೆ ನೀಡಿರುವುದು ಅತ್ಯಂತ ಸ್ಮರಣೀಯವಾಗಿದೆ. ಅತೀ ಚಿಕ್ಕವಯಸ್ಸಿನಲ್ಲೇ ದೈವಾದೀನರಾಗಿರುವುದು ಅವರ ಕುಟುಂಬ, ಅಭಿಮಾನಿಗಳಿಗೆ ಆಘಾತತಂದಿದ್ದು, ಕನ್ನಡ ಚಿತ್ರರಂಗ, ನಾಡಿಗೆ ಅಪಾರನಷ್ಟುಉಂಟು ಮಾಡಿದೆ. ಅವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿ ದಯಪಾಲಿಸಲಿ.
-ಶ್ರೀ ಸಿದ್ಧಲಿಂಗಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ