ಪಂಜಾಬ್ ಡಿಎಸ್ಪಿ ಬಂಧನ : ಕಾರಣ ಕೇಳಿದ್ರೆ ಷಾಕ್‌ ಆಗೋದು ಪಕ್ಕಾ….!

ಚಂಡೀಗಢ:

    ತನ್ನ ವಿರುದ್ಧ ದಾಖಲಾಗಿದ್ದ ದೂರನ್ನು ಮುಚ್ಚಿಹಾಕಲು ಹಿರಿಯ ಪೊಲೀಸ್ ಅಧಿಕಾರಿಯ ಸಿಬ್ಬಂದಿಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ತಮ್ಮದೇ ಇಲಾಖೆಯ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್‌ಪಿ) ಒಬ್ಬರನ್ನು ಬಂಧಿಸಿದ್ದಾರೆ.

   ಬಂಧಿತ ಫರೀದ್‌ಕೋಟ್‌ನ ಮಹಿಳೆಯರ ವಿರುದ್ಧದ ಅಪರಾಧ ವಿಭಾಗದ ಡಿಎಸ್‌ಪಿ ರಾಜನ್ ಪಾಲ್ ಅವರು, ಫರೀದ್‌ಕೋಟ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ಡಾ. ಪ್ರಜ್ಞಾ ಜೈನ್ ಅವರ ರಿಡರ್ ಆದ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಜಸ್ವಿಂದರ್ ಸಿಂಗ್ ಅವರಿಗೆ 1 ಲಕ್ಷ ರೂ. ಲಂಚ ನೀಡುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

   ರಾಜನ್ ಪಾಲ್ ವಿರುದ್ಧ ಪಕ್ಕಾ ಗ್ರಾಮದ ಕಿರಣ್‌ಜಿತ್ ಕೌರ್ ಎಂಬುವವರು ದೂರು ನೀಡಿದ್ದು, ವೈವಾಹಿಕ ವಿವಾದಕ್ಕೆ ಸಂಬಂಧಿಸಿದ ತಮ್ಮ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಲು ಡಿಎಸ್‌ಪಿ 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಆಕೆಯ ಸಹೋದರ ಕರ್ಮತೇಜ್ ಸಿಂಗ್ ಆರೋಪಿಸಿದ್ದಾರೆ. ಹಣ ಪಡೆದಿದ್ದರೂ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಕುಟುಂಬವು ಎಸ್‌ಎಸ್‌ಪಿ ಡಾ. ಪ್ರಜ್ಞಾ ಜೈನ್ ಅವರಿಗೆ ದೂರು ನೀಡಿತ್ತು.

   ಆರೋಪಿ ಅಧಿಕಾರಿ ತನ್ನ ದುಷ್ಕೃತ್ಯವನ್ನು ಮುಚ್ಚಿಹಾಕಲು ಮೇಲಾಧಿಕಾರಿ ಸಿಬ್ಬಂದಿಗೆ ಲಂಚ ನೀಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾಜನ್ ಪಾಲ್ ಅವರ ಬಂಧನವನ್ನು ದೃಢಪಡಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಅಮಾನತು ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link