‘ಕೆಡಿ’ ಸೆಟ್​ಗೆ ಬಂದ ಪುರಿ ಜಗನ್ನಾಥ್….!

ಬೆಂಗಳೂರು :

     ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಬಹುತಾರಾಗಣದ ಸಿನಿಮಾ ‘ಕೆಡಿ’ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದಾರೆ. ಇದೀಗ ಸಿನಿಮಾ ಸೆಟ್​ಗೆ ಖ್ಯಾತ ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್ ಭೇಟಿ ನೀಡಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಈ ವಿಷಯ ಹಂಚಿಕೊಂಡಿದ್ದು, ಹಳೆಯ ನೆನಪುಗಳಿಗೆ ಜಾರಿ ತುಸು ಭಾವುಕರಾಗಿದ್ದಾರೆ. ಪುನೀತ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’ ನಿರ್ದೇಶನ ಮಾಡಿದ್ದ, ‘ಪೋಕಿರಿ’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಪುರಿ ಜಗನ್ನಾಥ್, ‘ಕೆಡಿ’ ಸೆಟ್​ಗೆ ಭೇಟಿ ನೀಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ಪುರಿ ಜಗನ್ನಾಥ್ ಭೇಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ ರಕ್ಷಿತಾ ಪ್ರೇಮ್, ‘ಪುರಿ ಜಗನ್ನಾಥ್ ಮತ್ತು ಪ್ರೇಮ್ ಈ ಇಬ್ಬರು ನಿರ್ದೇಶಕರು ನನ್ನ ಸಿನಿಮಾ ಜೀವನದ ಪಯಣದ ಬಹುಮುಖ್ಯ ನಿರ್ದೇಶಕರು. ‘ಅಪ್ಪು’ ಸಿನಿಮಾದ ಮೂಲಕ ನನ್ನ ಹಾಗೂ ಪುರಿ ಅವರ ಗೆಳೆತನ ಪ್ರಾರಂಭವಾಯ್ತು. ಆಗಿನಿಂದ ಈಗಿನವರೆಗೂ ನಾವಿಬ್ಬರು ಒಳ್ಳೆಯ ಗೆಳೆಯರು ಸದಾ ಪರಸ್ಪರ ಸಂಪರ್ಕದಲ್ಲಿ ಇರುತ್ತೇವೆ. ಪರಸ್ಪರರ ಕಷ್ಟ-ಸುಖಗಳಲ್ಲಿ ಭಾಗಿ ಆಗಿದ್ದೀವಿ’ ಎಂದಿದ್ದಾರೆ. 

   ಮುಂದುವರೆದು, ‘ಪುರಿ ಅವರ ಪ್ರತಿಭೆಯ ಅಭಿಮಾನಿ ಆಗಿರುವ ನಾನು ಅವರ ಕೆಲಸವನ್ನು ಗೌರವಿಸುತ್ತಾ ಬಂದಿದ್ದೇನೆ. ಅವರ ಸಿನಿಮಾ ಹಲವಾರು ಮಂದಿಗೆ ಸ್ಪೂರ್ತಿ ನೀಡಿದೆ. ಪುರಿ ಅವರ ಶಾಂತತೆ, ವಿನಯತೆ ನನ್ನನ್ನು ಸಹ ವಿನಯದಿಂದ ಇರುವಂತೆ ಪ್ರೇರೇಪಿಸಿದೆ. ಏನೇ ಆದರೂ ಪುರಿ ಜಗನ್ನಾಥ್ ನನ್ನ ಬೆಂಬಲಕ್ಕೆ ನಿಂತಿರುತ್ತಾರೆ ಎಂಬ ವಿಶ್ವಾಸ ನನಗೆ ಸದಾ ಇದೆ. ನಮ್ಮ ‘ಕೆಡಿ’ ಸಿನಿಮಾ ಸೆಟ್​ಗೆ ಅವರು ಭೇಟಿ ನೀಡಿದ್ದು ಬಹಳ ಖುಷಿ ತಂದಿದೆ. ಸೆಟ್​ನ ಎಲ್ಲರೊಡನೆ ಅವರು ಮಾತನಾಡಿ ಸ್ಪೂರ್ತಿ ತುಂಬಿದ್ದಾರೆ’ ಎಂದಿದ್ದಾರೆ ರಕ್ಷಿತಾ.

   ಪುರಿ ಜಗನ್ನಾಥ್ ನಿರ್ದೇಶನ ಮಾಡಿದ ‘ಅಪ್ಪು’ ಸಿನಿಮಾ ಮೂಲಕ ರಕ್ಷಿತಾ ಚಿತ್ರರಂಗ ಪ್ರವೇಶಿಸಿದರು. ಆ ನಂತರ ‘ಅಪ್ಪು’ ಸಿನಿಮಾದ ತೆಲುಗು ರೀಮೇಕ್ ‘ಇಡಿಯಟ್’ನಲ್ಲೂ ರಕ್ಷಿತಾ ನಾಯಕಿಯಾಗಿ ನಟಿಸಿದರು. ಆ ಬಳಿಕ ಪುರಿ ನಿರ್ದೇಶನದ ಸೂಪರ್ ಹಿಟ್ ತೆಲುಗು ಸಿನಿಮಾಗಳಾದ ‘ಶಿವಮಣಿ’ ಜೂ ಎನ್​ಟಿಆರ್ ಜೊತೆಗೆ ‘ಆಂಧ್ರವಾಲಾ’ ಸಿನಿಮಾಗಳಲ್ಲಿಯೂ ರಕ್ಷಿತಾ ಪ್ರೇಮ್ ನಟಿಸಿದ್ದರು. ಪುರಿ ಜಗನ್ನಾಥ್, ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕ, ರಾಜಮೌಳಿ ಹಾಗೂ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಹ ಪುರಿಯ ಪ್ರತಿಭೆಯನ್ನು ಕೊಂಡಾಡುತ್ತಾರೆ. ಆದರೆ ಇತ್ತೀಚೆಗೆ ಪುರಿ ಜಗನ್ನಾಥ್​ಗೆ ಸತತ ಸೋಲುಗಳೇ ಎದುರಾಗುತ್ತಿವೆ. ಪುರಿ ನಿರ್ದೇಶನ ಮಾಡಿರುವ ಮೂರು ಸಿನಿಮಾಗಳು ಸತತವಾಗಿ ಸೋಲು ಕಂಡಿವೆ.

Recent Articles

spot_img

Related Stories

Share via
Copy link