ಪುಷ್ಪಾ-2 : ಪ್ರೇಕ್ಷಕನ ಕಿವಿ ಕಚ್ಚಿದ ಕ್ಯಾಂಟೀನ್‌ ಮಾಲೀಕ ….!

ಗ್ವಾಲಿಯರ್: 

    ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2: ದಿ ರೂಲ್ ವೀಕ್ಷಣೆ ವೇಳೆ ಚಿತ್ರಮಂದಿರದ ಕ್ಯಾಂಟೀನ್ ಮಾಲೀಕನೊಬ್ಬ ಪ್ರೇಕ್ಷಕನ ಕಿವಿ ಕಚ್ಚಿ, ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

    ಭಾನುವಾರ ಇಂದರ್‌ಗಂಜ್ ಪ್ರದೇಶದ ಕೈಲಾಶ್ ಟಾಕೀಸ್‌ನಲ್ಲಿ ಈ ಘಟನೆ ನಡೆದಿದೆ. ಚಿತ್ರದ ಇಂಟರ್ವಲ್ ಸಮಯದಲ್ಲಿ ಪ್ರೇಕ್ಷಕ ಶಬ್ಬೀರ್ ಆಹಾರ ಪದಾರ್ಥ ಖರೀದಿಸಲು ಕ್ಯಾಂಟೀನ್ ಗೆ ಹೋದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

    ಸ್ನ್ಯಾಕ್ಸ್ ಬಿಲ್ ಪಾವತಿಸಿಲ್ಲ ಎಂಬ ವಿಚಾರದಲ್ಲಿ ಶಬ್ಬೀರ್ ಮತ್ತು ಕ್ಯಾಂಟೀನ್ ಮಾಲೀಕ ರಾಜು ನಡುವೆ ವಾಗ್ವಾದ ನಡೆದಿದೆ .ಬಳಿಕ ರಾಜು ಮತ್ತು ಆತನ ಮೂವರು ಸಹಚರರು ಶಬ್ಬೀರ್‌ನನ್ನು ಥಳಿಸಿದ್ದು, ರಾಜು ಶಬ್ಬೀರ್‌ನ ಒಂದು ಕಿವಿಯನ್ನು ಕಚ್ಚಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

   ಆಹಾರ ಪದಾರ್ಥಗಳ ಬಿಲ್ ಪಾವತಿ ವಿಚಾರವಾಗಿ ನಡೆದ ವಾಗ್ವಾದ ಜಗಳಕ್ಕೆ ಕಾರಣವಾಗಿದೆ. “ಕ್ಯಾಂಟೀನ್ ಮಾಲೀಕ ಮತ್ತು ಆತನ ಮೂವರು ಸಹಚರರು ಶಬ್ಬೀರ್ ನನ್ನು ಥಳಿಸಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ ತಿಳಿಸಿದ್ದಾರೆ 

   ಶಬ್ಬೀರ್ ಸೋಮವಾರ ಪೊಲೀಸರಿಗೆ ದೂರು ನೀಡಿದ್ದು, ಅವರ ವೈದ್ಯಕೀಯ ವರದಿ ಆಧರಿಸಿ ಮಂಗಳವಾರ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಪುಷ್ಪ 2: ರೂಲ್ ಕೇವಲ ಆರು ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ಕಲೆಕ್ಷನ್ ಮಾಡಿದೆ. ಈ ಸಾಧನೆ ಮಾಡಿದ ಭಾರತದ ಮೊದಲ ಚಿತ್ರ ಎಂದು ನಿರ್ಮಾಪಕರು ತಿಳಿಸಿದ್ದಾರೆ.