ಬೆಳೆ ನಷ್ಟ ಪೋರ್ಟಲ್ ನಲ್ಲಿ ಶೀಘ್ರ ದಾಖಲಿಸಿ

ತುಮಕೂರು:

 

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ನೋಂದಣಿ ಕಾರ್ಯವನ್ನು ಪರಿಹಾರ ಪೋರ್ಟಲ್‍ನಲ್ಲಿ ದಾಖಲಿಸುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ 63,911 ಹೆ. ಬೆಳೆ ಸಮೀಕ್ಷೆ ನೋಂದಣಿ ಕಾರ್ಯ ಮುಗಿದಿದ್ದು, ಬಾಕಿ ಉಳಿಸಿಕೊಂಡಿರುವ 35,427 ಹೆ. ಪ್ರದೇಶದ ನೋಂದಣಿ ಕಾರ್ಯವನ್ನು 7 ದಿನಗಳ ಒಳಗಾಗಿ ಮೂರ್ಣಗೊಳಿಸಬೇಕು. ಬೋಗಸ್ ದಾಖಲೆಗಳನ್ನು ನಮೂದಿಸುವುದನ್ನು ನಿಯಂತ್ರಸಬೇಕು ಹಾಗೂ ಸಂಕಷ್ಟದಲ್ಲಿರುವ ಯಾವೊಬ್ಬ ನೈಜ ಫಲಾನುಭವಿಯೂ ಪರಿಹಾರದಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು.

ಪರಿಹಾರ ನೀಡಲು ಅನುದಾನವಿಲ್ಲವೆಂಬ ನೆಪ ಹೇಳದೆ, ಲಭ್ಯವಿರುವ ಅನುದಾನದಲ್ಲಿ ನಷ್ಟ ಹೊಂದಿರುವ ನೈಜ ರೈತರಿಗೆ ಪರಿಹಾರ ನೀಡುವ ಕಾರ್ಯಗಳಾಗಬೇಕು. ಅದೇ ರೀತಿ ಅತೀವೃಷ್ಟಿಯಿಂದ ಮನೆ ಕಳೆದುಕೊಂಡ ಹಾಗೂ ಇನ್ನೂ ಪರಿಹಾರ ಸಿಗದ ಫಲಾನುಭವಿಗಳನ್ನು ಗುರುತಿಸಿ ನಿಗಧಿತ ಸಮಯದೊಳಗೆ ಪರಿಹಾರ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ 35,000 ಕೋವಿಶೀಲ್ಡ್ ಲಸಿಕೆಗಳು ಲಭ್ಯವಿದ್ದು, 18 ವರ್ಷ ಮೇಲ್ಪಟ್ಟವರಿಗೆ ತ್ವರಿತಗತಿಯಲ್ಲಿ ಲಸಿಕೆ ನೀಡುವ ಮೂಲಕ ಲಸಿಕಾಕರಣವನ್ನು ಪೂರ್ಣಗೊಳಿಸಬೇಕು. ಯಾವುದೇ ಪ್ರಗತಿ ಕಾರ್ಯದಲ್ಲಿ ಚುನಾವಣೆಯ ಕಾರಣ ನೀಡಿ ವಿಳಂಬ ಮಾಡಬಾರದು. ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ ಹಾಗೂ ಪಾವಗಡ ತಾಲೂಕುಗಳಲ್ಲಿ ಲಸಿಕಾಕರಣ ಮಂದಗತಿಯಲ್ಲಿ ಸಾಗುತ್ತಿದ್ದು, ಕಡಿಮೆ ಲಸಿಕಾಕರಣವಾಗಿರುವ ಪ್ರದೇಶವನ್ನು ಗುರುತಿಸಿ ಲಸಿಕಾಕರಣ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪೈಕಿ ಪಹಣಿ ಒಗ್ಗೂಡಿಸುವಿಕೆ, ಸ್ಮಶಾನಕ್ಕೆ ಸರ್ಕಾರಿ ಜಾಗಗಳನ್ನು ಗುರುತಿಸಿ ಕಾಯ್ದಿರಿಸುವುದು, ಕಂದಾಯ ಗ್ರಾಮಗಳ ರಚನೆ ಹಾಗೂ ಪರಿಶೀಲನೆಗೆ ಸಂಬಂಧಿಸಿದ ಯಾವುದೇ ಪ್ರಕರಣಗಳನ್ನು ವಿನಾ ಕಾರಣ ಮುಂದೂಡದೆ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.

ವಿಧಾನಪರಿಷತ್ ಚುನಾವಣೆಯ ಮತದಾನವು ಯಾವುದೇ ದೋಷಗಳಿಲ್ಲದಂತೆ ಸುಗಮವಾಗಿ ನಡೆದಿದ್ದು, ಡಿಸೆಂಬರ್ 14ರಂದು ಮತ ಎಣಿಕೆ ಪ್ರಕ್ರಿಯೆಯನ್ನು ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ನಿಗಧಿತ ಸಮಯಕ್ಕಿಂತ ಮುಂಚಿತವಾಗಿ ಎಣಿಕಾ ಕೇಂದ್ರದಲ್ಲಿ ಹಾಜರಿರಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ ಸರ್ಕಾರದ ಸೂಚನೆಯಂತೆ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ 5 ಸಾವಿರಕ್ಕಿಂತಲೂ ಹೆಚ್ಚು ಬಾಕಿ ಇರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ರಸ್ತೆ, ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ದೂರುಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ವಿ. ಅಜಯ್, ಡಿಹೆಚ್‍ಒ ಡಾ: ನಾಗೇಂದ್ರಪ್ಪ, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕುಗಳ ತಹಸೀಲ್ದಾರ್‍ಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link