ನವದೆಹಲಿ :
ಟೆನಿಸ್ ಲೋಕದ ಅನಭಿಷಕ್ತ ದೊರೆ ರಾಫೆಲ್ ನಡಾಲ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. 38 ನೇ ವಯಸ್ಸಿನಲ್ಲಿ ತಮ್ಮ ನೆಚ್ಚಿನ ಕ್ರೀಡೆಗೆ ವಿದಾಯ ಹೇಳಲು ನಿರ್ಧರಿಸಿರುವ ಸ್ಪೇನ್‌ನ ದಿಗ್ಗಜ ಟೆನಿಸ್ ಆಟಗಾರ ನಡಾಲ್, ತಮ್ಮ ಈ ನಿವೃತ್ತಿಯ ನಿರ್ಧಾರವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಡುವ ಮೂಲಕ ಹಂಚಿಕೊಂಡಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್, ನವೆಂಬರ್ನಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್ ಪಂದ್ಯದ ನಂತರ ನಿವೃತ್ತಿಯಾಗುವುದಾಗಿ ಹೇಳಿಕೊಂಡಿದ್ದಾರೆ. ಡೇವಿಸ್ ಕಪ್ ಫೈನಲ್‌ನಲ್ಲಿ ಸ್ಪೇನ್, ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ನವೆಂಬರ್ 19 ಮತ್ತು 21 ರ ನಡುವೆ ನಡೆಯಲಿದೆ.
ಈ ಬಗ್ಗೆ ವಿಡಿಯೋ ರಿಲೀಸ್ ಮಾಡಿರುವ ನಡಾಲ್, ‘ನಾನು ವೃತ್ತಿಪರ ಟೆನಿಸ್ನಿಂದ ನಿವೃತ್ತಿಯಾಗುತ್ತಿದ್ದೇನೆ. ಕಳೆದ ಕೆಲವು ವರ್ಷಗಳಿಂದ ತುಂಬಾ ಕಷ್ಟವಾಗಿತ್ತು. ಅದರಲ್ಲೂ ಕಳೆದ ಎರಡು ವರ್ಷಗಳು ಸವಾಲಿನಿಂದ ಕೂಡಿದ್ದವು. ಇದು ತುಂಬಾ ಕಠಿಣ ನಿರ್ಧಾರ. ಆದರೆ ಜೀವನದ ಪ್ರತಿಯೊಂದು ಆರಂಭಕ್ಕೂ ಅಂತ್ಯವಿದೆ. ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಇಷ್ಟು ಸುದೀರ್ಘ ವೃತ್ತಿಜೀವನವನ್ನು ನಾನು ಊಹಿಸಿರಲಿಲ್ಲ. ಈಗ ನನ್ನ ಕೊನೆಯ ಪಂದ್ಯದ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾಗಿರುವ ರಾಫೆಲ್ ನಡಾಲ್, ನೊವಾಕ್ ಜೊಕೊವಿಚ್ ನಂತರ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ನಡಾಲ್ ತಮ್ಮ ವೃತ್ತಿಜೀವನದಲ್ಲಿ 22 ಗ್ರ್ಯಾಂಡ್‌ಸ್ಲಾಮ್‌ಗಳನ್ನು ಗೆದ್ದಿದ್ದರೆ, ಜೊಕೊವಿಚ್ 24 ಗ್ರ್ಯಾಂಡ್‌ಸ್ಲಾಮ್‌ಗಳನ್ನು ಗೆದ್ದಿದ್ದಾರೆ. ಕ್ಲೇ ಕೋರ್ಟ್ನ ಕಿಂಗ್ ಎಂತಲೇ ಖ್ಯಾತರಾಗಿದ್ದ ನಡಾಲ್, ತಮ್ಮ ವೃತ್ತಿಜೀವನದಲ್ಲಿ 14 ಫ್ರೆಂಚ್ ಓಪನ್‌ಗಳನ್ನು ಗೆದ್ದಿದ್ದಾರೆ. ಇದಲ್ಲದೆ, ಅವರು 4 ಬಾರಿ ಯುಎಸ್ ಓಪನ್ ಮತ್ತು ತಲಾ 2 ಬಾರಿ ವಿಂಬಲ್ಡನ್ ಮತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರ ಜೊತೆಗೆ 2008 ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿಯೂ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು.