ರಾಗಿ ಕಟಾವಿಗೆ ಕೂಲಿಯಾಳುಗಳೇ ಸಿಗುತ್ತಿಲ್ಲ

ತುಮಕೂರು:

ಈ ಜಿಲ್ಲೆ ತೆಂಗಿಗೆ ಹೇಗೆ ಪ್ರಸಿದ್ಧಿಯೋ ರಾಗಿ ಬೆಳೆಗೂ ಅಷ್ಟೇ ಪ್ರಸಿದ್ಧ. ಶೇಂಗಾ ಇಲ್ಲಿ ವಾಣಿಜ್ಯ ಬೆಳೆಯಾದರೆ ರಾಗಿ ವಾಣಿಜ್ಯ ಬೆಳೆಗಿಂತ ಹೆಚ್ಚಾಗಿ ತಾವೇ ಉಪಯೋಗಿಸುವ ಮಂದಿಯೇ ಹೆಚ್ಚು. ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಗುಬ್ಬಿ ಮೊದಲಾದ ತಾಲ್ಲೂಕುಗಳಲ್ಲಿ ಹೆಚ್ಚಾಗಿ ರಾಗಿ ಬೆಳೆಯಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಚಿ.ನಾ.ಹಳ್ಳಿ ಮತ್ತು ತಿಪಟೂರು ರಾಗಿ ಬೆಳೆಯುವುದರಲ್ಲಿ ಎತ್ತಿದ ಕೈ.

ಈ ಬಾರಿ ಆರಂಭದಿಂದಲೂ ತಕ್ಕಮಟ್ಟಿಗೆ ಮಳೆಯಾದ ಕಾರಣ ಕೃಷಿ ಚಟುವಟಿಕೆ ಹುರುಪಿನಿಂದಲೇ ಸಾಗಿತು. ರಾಗಿ ಫಸಲು ಚೆನ್ನಾಗಿಯೇ ಬೆಳೆಯಿತು. ಇನ್ನೇನು ಕೊಯ್ಲು ಮಾಡಬೇಕು ಎನ್ನುವಷ್ಟರಲ್ಲಿ ಆರಂಭವಾದ ನಿರಂತರ ಮಳೆ ತಿಂಗಳಿಗೂ ಅಧಿಕ ಕಾಲ ಹಿಡಿದು ಬಿಟ್ಟಿತು. ವಾಯುಭಾರ ಕುಸಿತದ ಪರಿಣಾಮ ಉಂಟಾದ ಮಳೆಯಿಂದಾಗಿ ಜಿಲ್ಲೆಯ ಬಹಳಷ್ಟು ಕಡೆ ರಾಗಿ ಬೆಳೆ ಮಕಾಡೆ ಮಲಗಿದೆ. ಶೇ.60ಕ್ಕೂ ಹೆಚ್ಚು ಪ್ರಮಾಣದ ರಾಗಿ ಫಸಲು ನೆಲಕ್ಕೆ ಬಾಗಿ ಮೊಳಕೆಯೊಡೆದಿರುವ ಉದಾಹರಣೆಗಳು ಎಲ್ಲ ಕಡೆ ಕಂಡುಬರುತ್ತಿದೆ.

ಕಳೆದ ಒಂದೂವರೆ ತಿಂಗಳಿನಿಂದ ಮೋಡ ಮುಸುಕಿದ ವಾತಾವರಣದ ಜೊತೆಗೆ ಜಿಟಿ ಜಿಟಿ ಮಳೆಯಿಂದಾಗಿ ಕೃಷಿ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಯಿತು. ಶೇಂಗಾ ಸೇರಿದಂತೆ ಇತರೆ ಬೆಳೆಯ ಮೇಲೆ ಆದ ಪರಿಣಾಮವೇ ರಾಗಿಯ ಮೇಲೂ ಆಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂಬಂತಹ ಸ್ಥಿತಿಯಲ್ಲಿ ಹಲವು ರೈತರಿದ್ದಾರೆ. ಮೊಳಕೆಯೊಡೆದಿರುವ ರಾಗಿ ಫಸಲನ್ನು ಕಂಡು ರೈತರು ಮಮ್ಮಲ ಮರುಗುತ್ತಿದ್ದಾರೆ. ಇತ್ತ ಅದನ್ನು ಎತ್ತುವಳಿ ಮಾಡಲಾಗದೆ ಹೊಲದಲ್ಲಿಯೇ ಬಿಡಲೂ ಆಗದೆ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ಈಗಾಗಲೇ ಮಳೆಗೆ ಬಿದ್ದು ಕರಗಿ ಹೋಗಿರುವ ರಾಗಿಯ ಚಿತ್ರಣ ಒಂದು ಕಡೆ ಮನಸ್ಸು ಕದಡುವ ರೀತಿಯಲ್ಲಿದ್ದರೆ ಮತ್ತೊಂದು ಕಡೆ ಕೊಯ್ಲಿಗೆ ಮಾಗಿ ನಿಂತಿರುವ ರಾಗಿ ಪೈರನ್ನು ಉಳಿಸಿಕೊಳ್ಳುವ ಬಗೆ ಹೇಗೆ ಎಂಬ ಚಿಂತೆ ರೈತರದ್ದು. ಕಳೆದ ಕೆಲವು ದಿನಗಳಿಂದ ಮಳೆ ಬಿಡುವು ಕೊಟ್ಟಿದೆ. ಆದರೆ ಮೋಡ ಮುಸುಕಿದ ವಾತಾವರಣವಿದ್ದು, ಯಾವಾಗ ಮಳೆ ಬರುವುದೋ ಎಂಬ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಇನ್ನು ಕೆಲವರು ಆದದ್ದಾಗಲಿ ಎಂದು ಕೊಯ್ಲಿಗೆ ಮುಂದಾಗಿದ್ದಾರೆ.

ಎಲ್ಲ ಕಡೆ ಈಗ ಕಟಾವು ಸಮಯವಾಗಿರುವುದರಿಂದ ರಾಗಿ ಕೊಯ್ಲು ಸೇರಿದಂತೆ ಯಾವುದಕ್ಕೂ ಕೂಲಿಯಾಳುಗಳು ಸಿಗುತ್ತಿಲ್ಲ. ಹಿಂದೆಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಯ ಬಂದಿತೆಂದರೆ ಇದಕ್ಕಾಗಿಯೇ ಒಂದಷ್ಟು ಕೂಲಿಯಾಳುಗಳ ಪಡೆ ಸಿದ್ಧವಾಗಿರುತ್ತಿತ್ತು. ಈಗ ಎಲ್ಲ ಕಡೆಯೂ ಆಳುಗಳ ಅಭಾವ ಕಂಡುಬರುತ್ತಿದೆ. ಒಮ್ಮೆಗೆ ಎಲ್ಲ ಕಡೆ ಕಟಾವು ಮಾಡಲು ಮುಂದಾಗಿರುವುದರಿಂದ ಆಳುಗಳಿಗೆ ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಸಮಸ್ಯೆ ಅರಿತು ಕೆಲವರು ಮುಯ್ಯಾಳು ಪದ್ಧತಿಗೆ ಮೊರೆ ಹೋಗಿದ್ದು ಅದರೂ ಸಹ ಸೂಕ್ತ ಸಮಯದಲ್ಲಿ ಕಟಾವು ಮಾಡಲಾಗುತ್ತಿಲ್ಲ.

ಇದೆಲ್ಲದರಿಂದ ಬೇಸತ್ತಿರುವ ರೈತಾಪಿ ವರ್ಗ ಆಧುನಿಕ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ತಾಲ್ಲೂಕುಗಳಲ್ಲಿ ರಾಗಿ ಕೊಯ್ಲು ಮಾಡುವ ಯಂತ್ರಗಳು ಜಮೀನಿನೊಳಗೆ ಲಗ್ಗೆ ಹಾಕುತ್ತಿವೆ. ಹಣ ಹೆಚ್ಚಾದರೂ ಪರವಾಗಿಲ್ಲ, ರಾಗಿ ಸುರಕ್ಷಿತವಾಗಿ ಸಿಗುವುದಲ್ಲ ಎಂಬ ರೈತರ ಮನಸ್ಥಿತಿಯೇ ಯಂತ್ರಗಳಿಗೆ ಭಾರಿ ಡಿಮ್ಯಾಂಡ್ ತಂದೊಡ್ಡಿದೆ. ಹಿಂದೆಲ್ಲ ಈ ಯಂತ್ರಗಳನ್ನು ಕೇಳುವವರೇ ಇರಲಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಯಂತ್ರಗಳು ಕೆಲವು ತಾಲ್ಲೂಕುಗಳಲ್ಲಿ ಕಾರ್ಯಾರಂಭ ಮಾಡಿವೆ. ಆದರೆ ಯಾವಾಗಲೂ ಈ ರೀತಿಯ ಡಿಮ್ಯಾಂಡ್ ಬಂದಿರಲಿಲ್ಲ. ವಾತಾವರಣದಲ್ಲಿನ ಬದಲಾವಣೆ, ಪ್ರಕೃತಿ ವಿಕೋಪದ ಪರಿಣಾಮ ಈಗ ಇಂತಹ ಯಂತ್ರಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಪ್ರತಿ ಗಂಟೆಗೆ ಇಂತಿಷ್ಟು ಎಂದು ದರ ನಿಗದಿಪಡಿಸಲಾಗಿದೆ. 2000 ರೂ.ಗಳಿಂದ 3000 ರೂ.ಗಳ ತನಕವೂ ದರ ನಿಗದಿಪಡಿಸಿರುವ ಉದಾಹರಣೆಗಳು ಕಂಡುಬರುತ್ತಿವೆ.

ರಾಗಿ ಬೆಳೆ ಕೊಯ್ಲು ಮಾಡುವ ಯಂತ್ರಗಳು ಹೊರರಾಜ್ಯದ ಯಂತ್ರಗಳಾಗಿದ್ದು, ಈ ವರ್ಷ ಹೆಚ್ಚು ಪ್ರಚಾರ ಪಡೆದುಕೊಂಡಿವೆ. ಸಹಜವಾಗಿಯೇ ಪ್ರತಿ ಎಕರೆಗೆ ದುಪ್ಪಟ್ಟು ಹಣ ಕೇಳತೊಡಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈಗ ಇದಕ್ಕೂ ದಲ್ಲಾಳಿಗಳು ಹುಟ್ಟಿಕೊಂಡಿದ್ದು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ದರ ನಿಗದಿಪಡಿಸಲಾಗುತ್ತಿದೆ.

ಯಂತ್ರಗಳಿಗೆ ಹಣ ಕೊಟ್ಟು ರಾಗಿ ಬೆಳೆ ಮನೆಗೆ ತುಂಬಿಸಿಕೊಳ್ಳುವಷ್ಟರ ವೇಳೆಗೆ ಅಷ್ಟೂ ರಾಗಿಯನ್ನು ಖರೀದಿಸಿದ ರೀತಿಯಲ್ಲಿಯೇ ವೆಚ್ಚ ತಗುಲುತ್ತಿದೆ. ಅಸಹಾಯಕ ಪರಿಸ್ಥಿತಿಗೆ ಸಿಲುಕಿರುವ ರೈತರು ಈಗ ಅನಿವಾರ್ಯವಾಗಿ ಆ ವೆಚ್ಚ ಭರಿಸಲು ಮುಂದಾಗುತ್ತಿದ್ದಾರೆ. ಇಲ್ಲವಾದರೆ ಹೊಲದಲ್ಲಿಯೇ ಮೊಳಕೆಯೊಡೆದು ಹಾಳಾಗುವ ರಾಗಿಯ ಸ್ಥಿತಿಯನ್ನು ಕಣ್ಣಾರೆ ನೋಡಬೇಕಲ್ಲ ಎಂಬ ಆತಂಕ ಅವರದ್ದು. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೃಷಿ ಯಂತ್ರಗಳ ದಲ್ಲಾಳಿಗಳು ಬೇಕಾದ ದರ ನಿಗದಿಪಡಿಸುತ್ತಿದ್ದಾರೆ. ಬೇಡಿಕೆಯೂ ಇರುವುದರಿಂದ ಯಂತ್ರಗಳ ಬಳಕೆಗೆ ಡಿಮ್ಯಾಂಡ್ ಬಂದಿರುವುದು ಸತ್ಯ.

ಕೃಷಿ ಇಲಾಖೆ ಜವಾಬ್ದಾರಿ ವಹಿಸಲಿ

ಅತಿವೃಷ್ಠಿ ಸಮಯದಲ್ಲಿ ರೈತಾಪಿ ವರ್ಗದ ನೆರವಿಗೆ ಸರ್ಕಾರಗಳು ಬರಬೇಕು. ಕೂಲಿಯಾಳುಗಳ ಸಮಸ್ಯೆ ಹೆಚ್ಚುತ್ತಿರುವುದರಿಂದ ಕೆಲವು ಭಾಗಗಳಲ್ಲಿ ರಾಗಿ ಕಟಾವು ಯಂತ್ರಗಳಿಗೆ ಡಿಮ್ಯಾಂಡ್ ಬಂದಿದೆ. ಆದರೆ ಅವುಗಳ ದರ ದುಪ್ಪಟ್ಟು ಆಗುತ್ತಿದೆ. ಕೃಷಿ ಇಲಾಖೆ ಇವುಗಳ ಮೇಲೆ ನಿಗಾ ಇಡಬೇಕು. ದರ ನಿಗದಿಪಡಿಸಬೇಕು. ಮೊದಲೇ ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರ ಮೇಲೆ ಮತ್ತೊಂದು ಬರೆ ಎಳೆಯಬಾರದು ಎನ್ನುತ್ತಾರೆ ಲಂಚಮುಕ್ತ ವೇದಿಕೆಯ ಮುಖಂಡ ಮಲ್ಲಿಕಾರ್ಜುನಯ್ಯ ಬಟ್ಟರಹಳ್ಳಿ.

ಮೊಳಕೆಯೊಡೆದಿರುವ ರಾಗಿ ಪೈರು
ಹಲವು ಕಡೆ ರಾಗಿ ಪೈರು ನೆಲಕ್ಕೆ ಬಿದ್ದು ಮೊಳಕೆಯೊಡೆದಿದೆ. ಇನ್ನು ಕೆಲವು ಕಡೆ ಮಾಗಿ ನಿಂತಿದೆ. ಇದನ್ನು ಬೇರ್ಪಡಿಸುವುದು ಮತ್ತೊಂದು ಸಂಕಷ್ಟ. ಚೆನ್ನಾಗಿರುವ ರಾಗಿಯ ಜೊತೆ ಕೊಳೆತ ರಾಗಿ ಹುಲ್ಲು ಸೇರಿಸಲಾಗದು. ಹಾಗೆಯೇ ಮೊಳಕೆಯೊಡೆದ ರಾಗಿ ಕೊಯ್ಲನ್ನು ಉತ್ತಮವಾಗಿರುವ ಕೊಯ್ಲಿನ ಜೊತೆ ಮಿಶ್ರಣ ಮಾಡಲಾಗದು. ಪ್ರತ್ಯೇಕವಾಗಿ ಕೊಯ್ಲು ಮಾಡಿ ಸಂಗ್ರಹಿಸುವುದು ಮತ್ತೊಂದು ಸಾಹಸದ ಕೆಲಸ. ಮಳೆಗೆ ಪೈರು ನೆನೆದು ನೆಲಕ್ಕೆ ಮಲಗಿರುವುದರಿಂದ ದನಕರುಗಳು ತಿನ್ನಲೂ ಆಗದಂತಹ ಹುಲ್ಲನ್ನು ರಕ್ಷಿಸಿಟ್ಟುಕೊಳ್ಳಬೇಕೆ ಅಥವಾ ಬಿಸಾಡಬೇಕೆ ಎಂಬ ಗೊಂದಲವೂ ರೈತರಲ್ಲಿದೆ.

 – ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap