ನವದೆಹಲಿ:
ಸಂಸತ್ ಬಜೆಟ್ ಅಧಿವೇಶನ ಆರಂಭದ ದಿನ ಉಭಯ ಸದನಗಳನ್ನುದ್ದೇಶಿಸಿದ್ದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.ಲೋಕಸಭೆಯಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ರಾಷ್ಟ್ರಪತಿಗಳ ಭಾಷಣದಲ್ಲಿ ಸರ್ಕಾರ ಮಾಡಿರುವ ಕೆಲಸಗಳ ಅದೇ ಹಳೆಯ ಪಟ್ಟಿಯೇ ಇದೆ ಹೊಸತೇನೂ ಎಂದು ಹೇಳಿದ್ದಾರೆ.
ಇದೇ ವೇಳೆ ಸರ್ಕಾರವನ್ನು ಟೀಕಿಸಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆ ವಿಫಲವಾಗಿದೆ. ದೇಶದ ಉತ್ಪಾದನಾ ಕ್ಷೇತ್ರ 60 ವರ್ಷಗಳಲ್ಲೇ ಕುಸಿತ ಕಂಡಿದೆ. “ಪ್ರಧಾನಿಯವರು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು, ಅದು ಒಳ್ಳೆಯ ಐಡಿಯಾ ಎಂದು ಭಾವಿಸುತ್ತೇನೆ. ನಾವು ಪ್ರತಿಮೆಗಳು, ಕಾರ್ಯಗಳು ಮತ್ತು ಹೂಡಿಕೆಗಳನ್ನು ನೋಡಿದ್ದೇವೆ. (ಆದರೆ) ಫಲಿತಾಂಶವು ನಿಮ್ಮ ಮುಂದೆಯೇ ಇದೆ. ಉತ್ಪಾದನೆ 2014 ರಲ್ಲಿ GDP ಯ ಶೇಕಡಾ 15.3 ರಿಂದ ಇಂದು GDP ಯ ಶೇಕಡಾ 12.6 ಕ್ಕೆ ಇಳಿದಿದೆ. ಇದು 60 ವರ್ಷಗಳಲ್ಲಿ ಉತ್ಪಾದನೆ ವಲಯದಲ್ಲಿ ದಾಖಲಾಗಿರುವ ಅತ್ಯಂತ ಕಡಿಮೆ ಪಾಲು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಪ್ರಧಾನಿಯನ್ನು ದೂಷಿಸುತ್ತಿಲ್ಲ ಎಂದು ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸಲಿಲ್ಲ ಎಂದು ಹೇಳುವುದು ನ್ಯಾಯಯುತವಲ್ಲ, ಪ್ರಧಾನಿಯವರು ಪ್ರಯತ್ನಿಸಿದರು, ಆದರೆ ಅವರು ವಿಫಲರಾದರು. ಮೇಕ್ ಇನ್ ಇಂಡಿಯಾ ಒಳ್ಳೆಯ ಪರಿಕಲ್ಪನೆ ಆಗಿತ್ತು, ಆದರೆ ಅದರಲ್ಲಿ ಮೋದಿ ವಿಫಲರಾದರು ಎಂಬುದು ಸ್ಪಷ್ಟವಾಗಿದೆ.” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ ಚೀನ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಪ್ರಮುಖ ರಾಷ್ಟ್ರೀಯ ಕಾಳಜಿಯ ವಿಷಯವಾಗಿದೆ. ಭಾರತದ ಪ್ರದೇಶದ ಒಳಗೆ ಚೀನಾ ಪಡೆಗಳು ನುಗ್ಗಿವೆ, ನಮ್ಮ ಸೇನಾ ಮುಖ್ಯಸ್ಥರು ಚೀನಿಯರು ನಮ್ಮ ಪ್ರದೇಶದೊಳಗೆ ಇದ್ದಾರೆ ಎಂದು ಹೇಳಿದ್ದಾರೆ. ಇದು ಸತ್ಯ. ಚೀನಾ ನಮ್ಮ ಪ್ರದೇಶದೊಳಗೆ ಇರುವುದಕ್ಕೆ ಮುಖ್ಯ ಕಾರಣ, ಚೀನಾ ಈ ದೇಶದೊಳಗೆ ಕುಳಿತಿರುವುದಕ್ಕೆ ಕಾರಣ ‘ಮೇಕ್ ಇನ್ ಇಂಡಿಯಾ’ ವಿಫಲವಾಗಿರುವುದಾಗಿದೆ
“ಚೀನಾ ಈ ದೇಶದೊಳಗೆ ಕುಳಿತಿರುವುದಕ್ಕೆ ಕಾರಣ ಭಾರತ ಹೆಚ್ಚು ಉತ್ಪಾದಿಸಲು ನಿರಾಕರಿಸುತ್ತಿರುವುದಾಗಿದೆ ಮತ್ತು ಭಾರತ ಉತ್ಪಾದನಾ ವಲಯದ ಕ್ರಾಂತಿಯನ್ನು ಮತ್ತೊಮ್ಮೆ ಚೀನಿಯರಿಗೆ ಬಿಟ್ಟುಕೊಡಲಿದೆ ಎಂದು ನಾನು ಚಿಂತಿತನಾಗಿದ್ದೇನೆ ಎಂದು ರಾಹುಲ್ ಗಾಂಧಿ ಸದನದಲ್ಲಿ ಹೇಳಿದ್ದಾರೆ.