ಬೆಂಗಳೂರು
ತಮ್ಮ ಜೈಲು ಶಿಕ್ಷೆಗೆ ಮೂಲವಾದ ಕೋಲಾರದ ನೆಲದಿಂದಲೇ ಕರ್ನಾಟಕ ವಿಧಾನಭೆ ಚುನಾವಣೆಯ ಪ್ರಚಾರ ಕಾರ್ಯವನ್ನು ಆರಂಭಿಸಲು, ಆ ಮೂಲಕ ರಣಕಹಳೆ ಊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ ಮೂರರಂದು ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಸಾಧ್ಯತೆಗಳಿದ್ದು,ಐದರಂದು ಕೋಲಾರದಿಂದ ರಾಜ್ಯ ಕಾಂಗ್ರೆಸ್ ಪ್ರಚಾರ ಸಮರ ಆರಂಭಿಸಲಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಈ ಹಿಂದೆ ಮಾಡಿದ ಭಾಷಣದಿಂದಾಗಿ ಸೂರತ್ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಅವರನ್ನು,ಇದೇ ಆಧಾರದ ಮೇಲೆ ಇದೀಗ ಲೋಕಸಭೆಯ ಸದಸ್ಯತ್ವದಿಂದಲೂ ಅನರ್ಹಗೊಳಿಸಲಾಗಿದೆ. ಈ ವಿಷಯವನ್ನೇ ಮುಂದಿಟ್ಟುಕೊಂಡು ದೇಶದ ಜನರ ಮುಂದೆ ಹೋಗಲು ನಿರ್ಧರಿಸಿರುವ ರಾಹುಲ್ ಗಾಂಧಿ,ಇದೀಗ ರಾಜ್ಯ ವಿಧಾನಸಭೆ ಚುನಾವಣೆಯನ್ನು ಇದಕ್ಕೆ ವೇದಿಕೆಯಾಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಮುಂದಿನ ತಿಂಗಳು ಐದರಂದು ಕೋಲಾರದಿಂದ ಕಾಂಗ್ರೆಸ್ ಪಕ್ಷ ಪ್ರಚಾರ ಸಮರ ಆರಂಭಿಸಲಿದ್ದು,ರಾಹುಲ್ ಗಾಂಧಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಕೋಲಾರದಲ್ಲಿ ಅವರು ಮಾಡಿದ ಭಾಷಣ,ಕಳ್ಳರೆಲ್ಲ ಮೋದಿ ಹೆಸರಿನವರೇ ಯಾಕಿರುತ್ತಾರೆ ಎಂಬ ಅಂಶವನ್ನು ಕೇಂದ್ರೀಕರಿಸಿದ್ದರಿAದ ಅವರ ವಿರುದ್ಧ ಸೂರತ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ,ರಾಹುಲ್ ಗಾಂಧಿ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ್ದು,ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಇದರ ಕಾವು ಮುಂದುವರಿದು ರಾಹುಲ್ ಗಾಂಧಿ ಅವರನ್ನು ಈಗ ಲೋಕಸಭೆಯ ಸದಸ್ಯತ್ವದಿಂದಲೂ ಅನರ್ಹಗೊಳಿಸಲಾಗಿದ್ದು,ಈ ಅಂಶವನ್ನೇ ಬಿಜೆಪಿ ವಿರುದ್ದದ ಪ್ರಹಾರಕ್ಕೆ ಅಸ್ತçವಾಗಿಸಿಕೊಳ್ಳಲು ರಾಹುಲ್ ಗಾಂಧಿ ಸಜ್ಜಾಗಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಏಪ್ರಿಲ್ ಐದರಂದು ಆರಂಭವಾಗಲಿದ್ದು,ಏಕಕಾಲಕ್ಕೆ ಇದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧದ ಧಾಳಿಗೂ ವೇದಿಕೆಯಾಗಲಿದೆ.
ಕೋಲಾರದಿಂದ ಸಿದ್ಧು ಸ್ಪರ್ಧೆ?
ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವರುಣಾ ಕ್ಷೇತ್ರದ ಜತೆ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧೆಯ ಕಣಕ್ಕಿಳಿಯಬಹುದು ಎಂದು ಕೆಪಿಸಿಸಿ ಮೂಲಗಳು ವಿವರ ನೀಡಿವೆ.ಈಗಾಗಲೇ ಸಿದ್ಧರಾಮಯ್ಯ ಅವರ ಸ್ಪರ್ಧೆಗೆ ಕೋಲಾರ ಕಾಂಗ್ರೆಸ್ ಅಣಿಯಾಗಿದ್ದು,ಈಗ ಇದ್ದಕ್ಕಿದ್ದಂತೆ ಅವರನ್ನು ಕೋಲಾರದ ಬದಲು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿರುವುದು ಸ್ಥಳೀಯ ನಾಯಕರ ಆಕ್ರೋಶಕ್ಕೆ ಗುರಿಯಾಗಿದೆ.
ಸಿದ್ಧರಾಮಯ್ಯ ಅವರು ಇಲ್ಲಿಂದ ಸ್ಪರ್ಧಿಸಿದರೆ ಕೋಲಾರ,ಚಿಕ್ಕಬಳ್ಳಾಪುರ ವ್ಯಾಪ್ತಿಯ ಐದಾರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತಿತ್ತು.ಆದರೆ ಇದ್ದಕ್ಕಿದ್ದಂತೆ ಸಿದ್ಧರಾಮಯ್ಯ ಅವರು ಕಣದಿಂದ ಹಿಂದೆ ಸರಿದಿರುವುದು ಸರಿಯಲ್ಲ ಎಂಬುದು ಸ್ಥಳೀಯ ನಾಯಕರ ವಾದ.
ಅವರ ಈ ಅಭಿಪ್ರಾಯವನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು,ಈ ಹಿನ್ನೆಲೆಯಲ್ಲಿ ವರುಣಾ ಕ್ಷೇತ್ರದ ಜತೆ,ಕೋಲಾರ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧೆಯ ಕಣಕ್ಕಿಳಿಯುವಂತೆ ಅದು ಸಿದ್ಧರಾಮಯ್ಯ ಅವರಿಗೆ ಸೂಚಿಸಬಹುದು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ