ನವದೆಹಲಿ:
ಉದ್ಯಮಿ ಗೌತಮ್ ಅದಾನಿ ಅವರಿಗೆ ಸಂಬಂಧಿಸಿದ ಭ್ರಷ್ಟಾಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಮರೆಮಾಚುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.ಭಾರತದಲ್ಲಿ ಅದಾನಿ ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದರೆ ಉತ್ತರ ನೀಡದ ಮೋದಿಯವರು, ವಿದೇಶದಲ್ಲಿ ಅದೇ ಪ್ರಶ್ನೆಗಳನ್ನು ಕೇಳಿದಾಗ ಅದು ವೈಯಕ್ತಿಕ ವಿಷಯ ಎನ್ನುತ್ತಾರೆ ಎಂದು ರಾಹುಲ್ ದೂರಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ದೇಶದಲ್ಲಿ ಪ್ರಶ್ನೆ ಕೇಳಿದರೆ ಮೌನ ತಾಳುತ್ತಾರೆ, ಆದರೆ, ವಿದೇಶದಲ್ಲಿ ಕೇಳಿದರೆ ಅದು ‘ವೈಯಕ್ತಿಕ ವಿಚಾರ’ ಎನ್ನುತ್ತಾರೆ! ‘ಅಮೆರಿಕದಲ್ಲಿಯೂ ಮೋದಿ ಅದಾನಿ ಜೀ ಅವರ ಭ್ರಷ್ಟಾಚಾರವನ್ನು ಮುಚ್ಚಿಟ್ಟಿದ್ದಾರೆ’ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಮಿತ್ರರ ಜೇಬನ್ನು ತುಂಬಿಸುವುದೇ ಮೋದಿ ಅವರಿಗೆ ‘ರಾಷ್ಟ್ರ ನಿರ್ಮಾಣದ’ ಕಾಯಕವಾಗಿದೆ. ಹೀಗಾಗಿ, ಲಂಚ ಪಡೆದು ದೇಶದ ಸಂಪತ್ತನ್ನು ಲೂಟಿ ಮಾಡುವುದು ‘ವೈಯಕ್ತಿಕ ವಿಚಾರ’ ಆಗುತ್ತದೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಿ ಗುರುವಾರ ಮಾತುಕತೆ ನಡೆಸಿದ್ದಾರೆ. ಈ ವೇಳೆ ಗೌತಮ್ ಅದಾನಿ ಅವರಿಗೆ ಸಂಬಂಧಿಸಿದ ವಿಚಾರಗಳು ಉಭಯ ನಾಯಕರ ಮಾತುಕತೆಯಲ್ಲಿ ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ ವಾಷಿಂಗ್ಟನ್‌ನಲ್ಲಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಉತ್ತರಿಸಿರುವ ಮೋದಿ, ‘ಭಾರತ ಪ್ರಜಾಪ್ರಭುತ್ವ ದೇಶ. ‘ವಸುಧೈವ ಕುಟುಂಬಕಂ’ ಎಂಬುದು ನಮ್ಮ ಸಂಸ್ಕೃತಿಯಾಗಿದೆ. ನಾವು ಇಡೀ ಜಗತ್ತನ್ನು ಒಂದು ಕುಟುಂಬವೆಂದು ಪರಿಗಣಿಸುತ್ತೇವೆ. ಪ್ರತಿಯೊಬ್ಬ ಭಾರತೀಯರೂ ನನ್ನವರು ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ.
ಮುಂದುವರಿದು, ಅಂತಹ ವೈಯಕ್ತಿಕ ವಿಚಾರಗಳಿಗೆ ಎರಡೂ ರಾಷ್ಟ್ರಗಳ ನಾಯಕರು ಒಟ್ಟಿಗೆ ಸೇರುವುದಿಲ್ಲ. ಎರಡು ದೇಶಗಳ ಇಬ್ಬರು ಪ್ರಮುಖ ನಾಯಕರು ಅಂತಹ ವೈಯಕ್ತಿಕ ವಿಷಯಗಳನ್ನು ಎಂದಿಗೂ ಚರ್ಚಿಸುವುದಿಲ್ಲ’ ಎಂದು ಹೇಳಿದ್ದಾರೆ.
