ಭೀಕರ ರೈಲು ದುರಂತ; 158 ಪ್ರಯಾಣಿಕರಿದ್ದ ಎರಡು ಬೋಗಿಗಳಿಗೆ ಬೆಂಕಿ!

ಹೈದರಾಬಾದ್‌: 

    ವಿಶಾಖಪಟ್ಟಣಂ-ದುವ್ವಾಡ ಮೂಲಕ ಎರ್ನಾಕುಲಂಗೆ ಹೋಗುತ್ತಿದ್ದ ಟಾಟಾನಗರ್-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನ ಎರಡು ಭೋಗಿಗಳಿಗೆ  ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರೈಲು ಬೆಂಕಿ ಹೊತ್ತಿಕೊಂಡಾಗ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ 12:45 ರ ಸುಮಾರಿಗೆ ಈ ಬೆಂಕಿ ದುರಂತ ಸಂಭವಿಸಿದೆ.

   ರೈಲಿನ ಪ್ಯಾಂಟ್ರಿ ಕಾರಿನ ಪಕ್ಕದಲ್ಲಿರುವ ಬಿ1 ಮತ್ತು ಎಂ2 ಎಸಿ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಲೋಕೋ ಪೈಲಟ್‌ಗಳು ಎಲಮಂಚಿಲಿ ಬಳಿಯ ರೈಲ್ವೆ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಗೆ ಕೂಡಲೇ ಮಾಹಿತಿ ನೀಡಲಾಯಿತು. ರಕ್ಷಣಾ ಸಿಬ್ಬಂದಿ ಅಲ್ಲಿಗೆ ತಲುಪುವ ಹೊತ್ತಿಗೆ ಎರಡು ಬೋಗಿಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದವು. ಅನಕಪಲ್ಲಿ, ಎಲಮಂಚಿಲಿ ಮತ್ತು ನಕ್ಕಪಲ್ಲಿಯಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದರು. 

   ಬಿ1 ಬೋಗಿಯಲ್ಲಿದ್ದ ಒಬ್ಬ ವ್ಯಕ್ತಿ ಸಜೀವ ದಹನವಾಗಿದ್ದಾನೆ. ಮೃತರನ್ನು ವಿಶಾಖಪಟ್ಟಣದ ಚಂದ್ರಶೇಖರ್ ಸುಂದರ್ (70) ಎಂದು ಗುರುತಿಸಲಾಗಿದೆ. ಇತರ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸುಮಾರು ಎರಡು ಡಜನ್ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸುಮಾರು 2,000 ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಸಿಲುಕಿದ್ದರು. ಈ ಘಟನೆಯಿಂದಾಗಿ ವಿಶಾಖಪಟ್ಟಣಂ-ವಿಜಯವಾಡ ಮಾರ್ಗದಲ್ಲಿ ಹಲವಾರು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೆಳಗಿನ ಜಾವ 3.30 ರ ನಂತರ ಪ್ರಯಾಣಿಕರನ್ನು ಬೇರೆ ರೈಲಿನಲ್ಲಿ ಸಾಗಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 

   ಕಳೆದ ವಾರ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್‌ ಚಿತ್ರದುರ್ಗದ ಬಳಿ ಬೆಂಕಿಗಾಹುತಿಯಾಗಿತ್ತು. 10 ಪ್ರಯಾಣಿಕರು ಸಜೀವ ದಹನವಾಗಿದ್ದರು. ಹಲವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಜೀವ ದಹನಕ್ಕೊಳಗಾದ ಪ್ರಯಾಣಿಕರ ಮೃತದೇಹಗಳನ್ನು ಡಿಎನ್ಎ ವರದಿ ಆಧರಿಸಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. 

   ಹುಬ್ಬಳ್ಳಿ ಎಫ್‌ಎಸ್ಎಲ್ ಲ್ಯಾಬ್‌ನಿಂದ ಫೊರೆನ್ಸಿಕ್ ವರದಿ ಶನಿವಾರ ಬೆಳಿಗ್ಗೆ ಲಭ್ಯವಾದ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಲಾರಿ ಚಾಲಕ ಕುಲದೀಪ್ ಯಾದವ್ ಅವರ ಕುಟುಂಬಸ್ಥರು ಇನ್ನೂ ಮುಂದೆ ಬರದ ಕಾರಣ, ಅವರ ಮೃತದೇಹ ಜಿಲ್ಲಾಸ್ಪತ್ರೆಯಲ್ಲಿಯೇ ಇರಿಸಲಾಗಿದೆ.

Recent Articles

spot_img

Related Stories

Share via
Copy link