ಇಂದೋರ್:
ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಸೋನಂ ರಘುವಂಶಿ ಮತ್ತು ಸಂಜಯ್ ವರ್ಮ ಎಂಬಾತನ ನಡುವೆ ಸಂಪರ್ಕವಿತ್ತು ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಸೋನಂ ಟ್ರೂ ಕಾಲರ್ ಆ್ಯಪ್‌ನಲ್ಲಿ ಸಂಜಯ್ ವರ್ಮ ಹೆಸರಿನಲ್ಲಿ ನೋಂದಾಯಿತ ಸಂಖ್ಯೆಯನ್ನು ಆಗಾಗ ಸಂಪರ್ಕಿಸುತ್ತಿದ್ದಳು. ಈ ಸಂಖ್ಯೆಯು ಜೂನ್ 8 ರಾತ್ರಿ 11:20ಕ್ಕೆ ಆಫ್ ಆಗಿದ್ದು, ಆ ರಾತ್ರಿ ಸೋನಂ ಘಾಜಿಪುರದಲ್ಲಿದ್ದಳು. ಮಾರ್ಚ್ 1 ರಿಂದ ಏಪ್ರಿಲ್ 8 ರವರೆಗೆ ಸೋನಂ ಸಂಜಯ್‌ಗೆ 100ಕ್ಕೂ ಹೆಚ್ಚು ಕರೆಗಳನ್ನು ಮಾಡಿದ್ದಾಳೆ ಎಂದು ವರದಿಯಾಗಿದೆ. ಮೂಲಗಳು, ಮೂರು ವಾರಗಳಲ್ಲಿ 234 ಕರೆಗಳನ್ನು ಮಾಡಿದ್ದಾಳೆ ಎಂದು ತಿಳಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಾಗಿದ್ರೆ ಈ ಸಂಜಯ್ ವರ್ಮ ಯಾರು? ಈತನಿಗೂ ಸೋನಂಗೂ ಏನು ಸಂಬಂಧ? ಸಂಜಯ್ ವರ್ಮ ಬೇರೆ ಯಾರೂ ಅಲ್ಲ ಸೋನಂ ಪ್ರಿಯಕರ, ರಾಜ್ ಕುಶ್ವಾಹ್. ಪೊಲೀಸರ ಪ್ರಕಾರ, ಯಾವುದೇ ಅನುಮಾನ ಬರದಂತೆ ಸೋನಮ್ ತನ್ನ ಪ್ರಿಯಕರ ರಾಜ್‌ನ ಮೊಬೈಲ್ ಸಂಖ್ಯೆಯನ್ನು “ಸಂಜಯ್ ವರ್ಮಾ” ಎಂದು ಸೇವ್ ಮಾಡಿಕೊಂಡಿದ್ದಳಂತೆ. ಪೊಲೀಸರು ಪ್ರವೇಶಿಸಿದ ದಾಖಲೆಗಳ ಪ್ರಕಾರ, ಮಾರ್ಚ್ 1 ರಿಂದ ಏಪ್ರಿಲ್ 8 ರವರೆಗೆ 39 ದಿನಗಳ ಅವಧಿಯಲ್ಲಿ ಸೋನಮ್ ಮತ್ತು ಸಂಜಯ್ 234 ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಇಬ್ಬರೂ ಪ್ರತಿ ಬಾರಿ ಕನಿಷ್ಠ 30 ರಿಂದ 60 ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ದಾಖಲೆಗಳು ತೋರಿಸಿವೆ.
ಮೇ 23 ರಂದು ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್‌ನ ವೇಯ್ ಸಾವ್‌ಡಾಂಗ್ ಜಲಪಾತದ ಬಳಿ ರಾಜಾ ಅವರನ್ನು ಕೊಲೆ ಮಾಡಲಾಗಿತ್ತು. ಜೂನ್ 2 ರಂದು ಅವರ ಶವ ಪತ್ತೆಯಾಗಿತ್ತು. ಪೊಲೀಸರ ಪ್ರಕಾರ, ಸೋನಂ ರಘುವಂಶಿ ಕೊಲೆಗೆ ಮೂವರನ್ನು ನೇಮಿಸಿದ್ದಳು. ಆರೋಪಿಗಳಲ್ಲಿ ಒಬ್ಬನಾದ ವಿಶಾಲ್ ಸಿಂಗ್ ಚೌಹಾಣ್, ಸ್ಥಳೀಯ ಕತ್ತಿಯಾದ “ದಾವೊ” ಎಂಬ ಆಯುಧದಿಂದ ರಾಜಾ ಅವರ ಮೇಲೆ ಮೊದಲು ದಾಳಿ ಮಾಡಿದ್ದಾನೆ. ಸೋನಂ ದಾಳಿಯನ್ನು ನೋಡಿ, ರಾಜಾ ಕಿರುಚಾಡುವಾಗ ಓಡಿಹೋಗಿ, ಅವರು ಸತ್ತ ನಂತರ ಮರಳಿದ್ದಾಳೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಶಿಲ್ಲಾಂಗ್ ಪೊಲೀಸರ ವಿಶೇಷ ತನಿಖಾ ತಂಡ (SIT) ಇಂದೋರ್‌ನಲ್ಲಿ ತನಿಖೆಯನ್ನು ತೀವ್ರಗೊಳಿಸಿದೆ. ಮಂಗಳವಾರ, ಆರೋಪಿಗಳೊಂದಿಗೆ ಅಪರಾಧದ ಸ್ಥಳಕ್ಕೆ ಭೇಟಿ ನೀಡಿ ಘಟನೆಯನ್ನು ಪುನರಾವರ್ತಿಸಲಾಯಿತು. ರಾಜಾನ ಸಹೋದರರನ್ನು ವಿಚಾರಣೆಗೊಳಪಡಿಸಲಾಗಿದೆ. ಶಿಲ್ಲಾಂಗ್‌ನ SIT ತಂಡವು ಸೋನಂನ ಮನೆಯಲ್ಲಿ ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ. ಇನ್ನೊಬ್ಬ ಆರೋಪಿ ರಾಜ್ ಕುಶ್ವಾಹನ ಮನೆಯಲ್ಲೂ ತನಿಖೆ ನಡೆಯಬಹುದು. ಶಿಲ್ಲಾಂಗ್‌ನಲ್ಲಿ ಆರೋಪಿಗಳ ವಿಚಾರಣೆಯಿಂದ ಸಂಗ್ರಹಿಸಿದ ಮಾಹಿತಿಯನ್ನು ಇಂದೋರ್‌ನಲ್ಲಿ ಪರಿಶೀಲಿಸಲಾಗುತ್ತಿದೆ.








