ನವದೆಹಲಿ:
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿರುವುದನ್ನು ಅಭಿಮಾನಿಗಳಿನ್ನೂ ಅರಗಿಸಿಕೊಂಡಿಲ್ಲ. ಉಭಯ ಆಟಗಾರರ ನಿವೃತ್ತಿಗೆ ಬಿಸಿಸಿಐ ಒತ್ತಾಯಿಸಿದ್ದೇ ಕಾರಣ ಎಂಬ ಮಾತುಗಳು ಹಲವು ಬಾರಿ ಕೇಳಿ ಬಂದಿತ್ತು. ಇದೀಗ ಈ ಬಗ್ಗೆ ಬಿಸಿಸಿಐ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ. ಕೆಂಪು ಚೆಂಡಿನ ಕ್ರಿಕೆಟ್‌ನಿಂದ ಹಿಂದೆ ಸರಿಯುವ ನಿರ್ಧಾರವನ್ನು ಆಟಗಾರರು ಮಾತ್ರ ತೆಗೆದುಕೊಂಡಿದ್ದಾರೆ. ಇದರಲ್ಲಿ ಮಂಡಳಿಯ ಯಾವುದೇ ಹಸ್ತಕ್ಷೇಪ ಅಥವಾ ಒತ್ತಡವಿಲ್ಲ ಎಂದಿದ್ದಾರೆ.
ವದಂತಿಗಳ ಬಗ್ಗೆ ಎನ್‌ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಶುಕ್ಲಾ, “ನಾನು ಇದನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ನಾವೆಲ್ಲರೂ ರೋಹಿತ್ ಮತ್ತು ವಿರಾಟ್ ಅನುಪಸ್ಥಿತಿಯನ್ನು ಅನುಭವಿಸುತ್ತೇವೆ. ಆದರೆ ಅವರು ಸ್ವತಃ ನಿರ್ಧಾರ ತೆಗೆದುಕೊಂಡರು. ಯಾವುದೇ ಆಟಗಾರ ಯಾವಾಗ ನಿವೃತ್ತಿ ಹೊಂದಬೇಕು ಮತ್ತು ಯಾವ ಸ್ವರೂಪದಿಂದ ನಿವೃತ್ತರಾಗಬೇಕು ಎಂದು ಹೇಳಬಾರದು ಎಂಬ ನೀತಿಯನ್ನು ಬಿಸಿಸಿಐ ಹೊಂದಿದೆ. ಇದು ಆಟಗಾರನಿಗೆ ಬಿಟ್ಟದ್ದು. ಇದು ಅವರ ಸ್ವಂತ ನಿರ್ಧಾರ. ಅವರು ಸ್ವತಃ ನಿವೃತ್ತಿ ಹೊಂದಿದರು. ನಾವು ಯಾವಾಗಲೂ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ನಾವು ಅವರನ್ನು ಉತ್ತಮ ಬ್ಯಾಟ್ಸ್‌ಮನ್‌ಗಳು ಎಂದು ಪರಿಗಣಿಸುತ್ತೇವೆ. ಒಳ್ಳೆಯ ವಿಷಯವೆಂದರೆ ಅವರು ಏಕದಿನ ಪಂದ್ಯಗಳಲ್ಲಿ ಲಭ್ಯವಿರುವುದು” ಎಂದು ಹೇಳಿದರು.
“ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ಮತ್ತು ರೋಹಿತ್ ನೀಡಿದ ಕೊಡುಗೆಗಳಿಗಾಗಿ ಬಿಸಿಸಿಐ ಅವರನ್ನು ಸದಾ ಗೌರವಿಸುತ್ತದೆ. ಆದರೆ ಯಾವುದೇ ಸ್ವರೂಪದಿಂದ ಹಿಂದೆ ಸರಿಯುವ ಆಟಗಾರನ ನಿರ್ಧಾರವನ್ನು ಅದು ನಿರ್ದೇಶಿಸುವುದಿಲ್ಲ ಅಥವಾ ಪ್ರಭಾವಿಸುವುದಿಲ್ಲ. ಮಂಡಳಿಯು ದೀರ್ಘ ಸ್ವರೂಪದಲ್ಲಿ ಇಬ್ಬರು ದಂತಕಥೆಗಳನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತದೆ” ಎಂದು ಅವರು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಟೀಮ್ ಇಂಡಿಯಾದ ಮಾಜಿ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಅವರು ಕೊಹ್ಲಿ ಮತ್ತು ರೋಹಿತ್ ನಿವೃತ್ತಿಯ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದ್ದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನು ಮುಂದೆ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ. ಹೀಗಾಗಿ ಅವರು ನಿವೃತ್ತಿ ತೆಗೆದುಕೊಂಡಿದ್ದಾರೆ. ಅವರಿಬ್ಬರೂ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಕೆಲಸ ಮಾಡಿದ್ದಾರೆ ಮತ್ತು ತಂಡಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದರು.
