ಮಂಡ್ಯ ಜನತೆಗೆ ಕೃತಜ್ಞತೆ ತಿಳಿಸಿದ ಕುಮಾರಸ್ವಾಮಿ …..!

ಬೆಂಗಳೂರು:

    ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಇದೇ ಮೊದಲನೇ ಬಾರಿಗೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಪುಟದ ಸಚಿವರು ಭಾನುವಾರ ಸಂಜೆ ನವದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

     ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಕುಮಾರಸ್ವಾಮಿ ಒಂಬತ್ತನೇ ವ್ಯಕ್ತಿಯಾಗಿದ್ದರೂ, ಎನ್‌ಡಿಎ ಪಾಲುದಾರರಲ್ಲಿ ಮೊದಲಿಗರಾಗಿದ್ದಾರೆ.ಪಕ್ಷದ ನಾಯಕರಾದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶೆಂಪೂರ್ ಮತ್ತಿತರರು ಪ್ರಮಾಣ ವಚನ ಸ್ವೀಕಾರಕ್ಕೆ ಸಾಕ್ಷಿಯಾಗಿದರು.

    ಪ್ರಮಾಣ ವಚನ ಸ್ವೀಕಾರದ ಬಳಿಕ ಮಾತನಾಡಿದ ಕುಮಾರಸ್ವಾಮಿಯವರು, ಕೃಷಿ ಸಂಬಂಧಿತ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು, ಬಾಕಿ ಇರುವ ಯೋಜನೆಗಳ ಮಂಜೂರಾತಿ ಸೇರಿದಂತೆ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡುವುದಾಗಿ ಹೇಳಿದರು.

    ಈ ನಡುವೆ ಕುಮಾರಸ್ವಾಮಿ ಕೇಂದ್ರ ಸಚಿವ ಸಂಪುಟ ಸೇರ್ಪಡೆಯಿಂದ ಸಂಭ್ರಮದಲ್ಲಿರುವ ಜೆಡಿಎಸ್‌ನ ಪದಾಧಿಕಾರಿಗಳು ಹಳೆ ಮೈಸೂರು ಭಾಗದಾದ್ಯಂತ ಸಂಭ್ರಮಾಚರಣೆ ನಡೆಸಿದ್ದಾರೆ.

    ಗೌರವಾನ್ವಿತ ಪ್ರಧಾನಿ ನರೇಂದ್ರಿ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ನಾನು ಸಂಪುಟ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದೆ. ಅಧಿಕಾರ ಗೌಪ್ಯತೆಯ ಪ್ರತಿಜ್ಞೆ ಭೋಧಿಸಿದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಗೌರವಪೂರ್ವಕ ಧನ್ಯವಾದಗಳು. ದೇಶ ಸೇವೆಗೆ ಅವಕಾಶ ಕಲ್ಪಿಸಿ ಈ ಅಮೃತಕ್ಷಣಕ್ಕೆ ಕಾರಣೀಭೂತರಾದ ಮಂಡ್ಯ ಲೋಕಸಭೆ ಕ್ಷೇತ್ರದ ಮಹಾಜನತೆಗೆ, ಸಮಸ್ತ ಕನ್ನಡಿಗರಿಗೆ ಹಾಗೂ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ತುಂಬು ಹೃದಯದ ಕೃತಜ್ಞತೆಗಳು ಎಂದು ಹೇಳಿದ್ದಾರೆ.

   ಕುಮಾರಸ್ವಾಮಿಯವರು ಮಾಜಿ ಪ್ರಧಾನಮಂತ್ರ ಎಚ್.ಡಿ.ದೇವೇಗೌಡರ ಪುತ್ರರಾಗಿದ್ದು, ಕೇಂದ್ರ ಸಂಪುಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಪ್ರಧಾನಿಗಳ ಮಕ್ಕಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

    ಈ ಹಿಂದೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಕ್ಕಳಾದ ಹರಿಕೃಷ್ಣ ಶಾಸ್ತ್ರಿ ಮತ್ತು ಅನಿಲ್ ಶಾಸ್ತ್ರಿ (ತಲಾ ಒಂದು ಬಾರಿ) ಮತ್ತು ಚೌಧರಿ ಚರಣ್ ಸಿಂಗ್ ಅವರ ಪುತ್ರ ಅಜಿತ್ ಸಿಂಗ್ (ಮೂರು ಬಾರಿ) ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.

    1996ರಲ್ಲಿ ಕನಕಪುರ ಕ್ಷೇತ್ರದಿಂದ ಗೆದ್ದ ನಂತರ ಕುಮಾರಸ್ವಾಮಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಆದರೆ, ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾದರು. 2004 ರಲ್ಲಿ ಶಾಸಕರಾದರು ಮತ್ತು 2006 ಮತ್ತು 2007 ರ ನಡುವೆ ಕರ್ನಾಟಕದ ಸಿಎಂ ಆಗಿ ಸೇವೆ ಸಲ್ಲಿಸಿದರು. 2009 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾದ ನಂತರ ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಕೊಂಡರು. ಈ ವೇಳೆ ಉಪ ಪ್ರಧಾನಿಯಾಗುತ್ತಾರೆಂಬ ಊಹಾಪೋಹಗಳು ಸೃಷ್ಟಿಯಾಗಿದ್ದವು.

    ಮತ್ತೆ 2013 ರಲ್ಲಿ ವಿಧಾನಸಭೆಗೆ ಮರಳಿದರು. 2018 ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಪಕ್ಷಕ್ಕೂ ಬಹುಮತ ನೀಡದ ಕಾರಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಿತು. ಈ ವೇಳೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರು. 2023 ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಲೋಕಸಭೆ ಚುನಾವಣೆಗೆ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ಮಂಡ್ಯದಿಂದ ಕಣಕ್ಕಿಳಿದಿದ್ದ ಕುಮಾರಸ್ವಾಮಿಯವರು ಭರ್ಜರಿ ಗೆಲವು ಸಾಧಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap