ಮಧುಗಿರಿ:
ಆರ್.ರಾಜೇಂದ್ರ ರಾಜಣ್ಣ ವಿಧಾನಪರಿಷತ್ ಸದಸ್ಯರಾಗಿ ಚುನಾಯಿತರಾಗಿರುವುದು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ತಾಲ್ಲೂಕು ಕಾಂಗ್ರೆಸ್‍ನ ಭದ್ರಕೋಟೆ ಎನ್ನುವುದು ಈ ಫಲಿತಾಂಶದಿಂದ ನಿರೂಪಿತವಾಗಿದೆ.
ಮಾಜಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ನವರು 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ಆರ್. ರಾಜೇಂದ್ರ ಕಾಂಗ್ರೆಸ್ ಕಾರ್ಯಕರ್ತರ ನೋವು- ನಲಿವುಗಳಲ್ಲಿ ಭಾಗಿಯಾಗಿ ತಂದೆಗೆ ತಕ್ಕ ಮಗನಂತೆ ರಾಜಕಾರಣದಲ್ಲಿ ಮಿಂಚಿನ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿದ್ದರು.
ಆರ್. ರಾಜೇಂದ್ರ ಗೆ ಯಾವುದೇ ಅಧಿಕಾರವಿಲ್ಲದಿದ್ದರೂ ತನಗೆ ಸಿಕ್ಕ ಅಧಿಕಾರದ ವ್ಯಾಪ್ತಿಯಲ್ಲಿ ರೈತರಿಗೆ ರಸಗೊಬ್ಬರದ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದು, ಕೊರೋನಾ ದಂತಹ ಕಷ್ಟಕಾಲದಲ್ಲಿ ಪಟ್ಟಣದಲ್ಲಿರುವ ಎಂಜಿಎಂ ಪ್ರೌಢಶಾಲೆ ಆವರಣದಲ್ಲಿ ಬಡವರಿಗೆ ಪ್ರತಿನಿತ್ಯ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದು, ಎರಡು ಆ್ಯಂಬ್ಯುಲೆನ್ಸ್ ನೀಡಿದ್ದು, ಸಾರ್ವಜನಿಕ ಆಸ್ಪತ್ರೆಗೆ ಗ್ಯಾಸ್ ಸಿಲಿಂಡರ್ ಗಳನ್ನು ನೀಡಿದ್ದು, ಕೊರೋನಾ ಸೋಂಕಿತರಿಗೆ ವೈದ್ಯಕೀಯ ಕಿಟ್‍ಗಳನ್ನು ವಿತರಿಸಿದ್ದು, ರೈತರು ತಾವು ಬೆಳೆದ ತರಕಾರಿಗಳನ್ನು ಮಾರುಕಟ್ಟೆ ಮಾಡಲು ತೊಂದರೆಯಾದಾಗ ಅವರ ಬಳಿ ಖರೀದಿಸಿ ಸಮೀಪದಲ್ಲೇ ಇದ್ದ ಬಡವರಿಗೆ ವಿತರಿಸಿದ್ದು, ಕೊರೋನಾ ವಾರಿಯರ್ಸ್‍ಗಳನ್ನು ಕಾಲಕಾಲಕ್ಕೆ ಗುರುತಿಸಿ ಪೆÇ್ರೀತ್ಸಾಹಿಸಿದ್ದಲ್ಲದೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಮೃತಪಟ್ಟ ಕಾರ್ಯಕರ್ತರ ನೆನಪಿಗಾಗಿ ತಂದೆ ರಾಜಣ್ಣನವರ ಜೊತೆಗೂಡಿ ತಾಲ್ಲೂಕಿನಾದ್ಯಂತ ಸಸಿಗಳನ್ನು ನೆಟ್ಟರು ಹಾಗೂ ಮೃತಪಟ್ಟ ಕಾರ್ಯಕರ್ತ ಕುಟುಂಬ ವರ್ಗದವರ ಜತೆಯಲ್ಲಿ ನಾನಿದ್ದೇನೆ ಎಂದು ಧೈರ್ಯ ತುಂಬಿ, ಜಾತ್ಯತೀತವಾಗಿ ಆರ್ಥಿಕ ಸಹಾಯ ಮಾಡಿದ್ದನ್ನು ಯಾರೂ ಮರೆಯುವಂತಿಲ್ಲ. ಮಾತು ಬೆಳ್ಳಿ ಮೌನ ಬಂಗಾರ ಎಂಬ ನಾಣ್ಣುಡಿಯಂತೆ ಸಾಮಾನ್ಯನ ಕಷ್ಟ ದಲ್ಲಿ ಸಹಕರಿಸಿದ್ದಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ಮಾಡುತ್ತಾ, ಜನಾನುರಾಗಿಯಾಗಿ ಮಧುಗಿರಿ ಕ್ಷೇತ್ರದಲ್ಲಿ ನಿರಂತರ ವಾಗಿ ಕೆಲಸ ಮಾಡತೊಡಗಿದರು. ಇದಲ್ಲದೆ ತುಮಕೂರು ಜಿಲ್ಲಾ ಕೇಂದ್ರದಲ್ಲಿ ಸಹ ಕೊರೋನಾ ಸಂದರ್ಭದಲ್ಲಿ ಊಟದ ವ್ಯವಸ್ಥೆ ಮಾಡಿ ಜನಮನ್ನಣೆ ಗಳಿಸಿದ್ದರು.
ಫಲಿಸದ ಎಚ್‍ಡಿಡಿ ತಂತ್ರ-ಕ್ಷೇತ್ರದಲ್ಲಿ ಮಕಾಡೆ ಮಲಗಿದ ಜೆಡಿಎಸ್ :
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜುಗಿಂತ ಹನ್ನೆರಡು ಸಾವಿರಕ್ಕೂ ಅಧಿಕ ಮತಗಳು ಹಿನ್ನಡೆಯಾಗಿತ್ತು.
ಇದಕ್ಕೆ ಕಾರಣ ಏನೇ ಇದ್ದರೂ ದೇವೇಗೌಡರ ನನ್ನ ಸೋಲಿಸಿದವರನ್ನು ಮತ್ತು ಅವಮಾನಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಿ ಎಂಬ ಹೇಳಿಕೆ, 2023 ಮತ್ತು 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ ತುಮಕೂರು ಜಿಲ್ಲೆಯಲ್ಲಿಯೇ ಜಾಂಡಾ ಹೂಡುವುದಾಗಿ ಹೇಳಿದ್ದು, ಚುನಾವಣಾ ತಂತ್ರ ಎಳೆಯುವಲ್ಲಿ ವಿಫಲರಾಗಿ, ಮತದಾನದ ಹಿಂದಿನ ದಿನವೂ ಸಹ ರಾತ್ರಿಇಡೀ ಕೈ ಮರದಲ್ಲಿರುವ ಮಧುಗಿರಿ ಶಾಸಕರ ಮನೆಗೆ ಭೇಟಿ ನೀಡಿ ಏನೇ ತಂತ್ರ ರೂಪಿಸಿದರೂ ಕೂಡ ಪ್ರಬುದ್ಧ ಮತದಾರರು ಮಾತ್ರ ಸದಾ ಕೈಗೆ ಸಿಗುವ ರಾಜೇಂದ್ರರ ಕೈ ಹಿಡಿದಿರುವುದು ಸಾಬೀತಾಗಿದೆ.
ಎಚ್.ಡಿ. ದೇವೇಗೌಡರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಸಹ ಓಡಾಡದೆ ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಕುಳಿತು ರಾಜಕಾರಣ ಮಾಡಿದ್ದರು. ಈ ವಿಧಾನ ಪರಿಷತ್ ಚುನಾವಣೆಯಲ್ಲಿ ನವ ತರುಣನಂತೆ ಕ್ಷೇತ್ರದಲ್ಲಿ ಸಾಕಷ್ಟು ಬಾರಿ ಸುತ್ತಿದರು. ಆದರೆ ಎ. ಕೃಷ್ಣಪ್ಪನವರ ಸೋಲನ್ನು ಯಾದವ ಸಮುದಾಯದವರು ಮರೆತಂತಿಲ್ಲ, ಜೆಡಿಎಸ್‍ನ್ನು ದೂರ ಇಟ್ಟುಕೊಂಡು ಬಂದರು.
ಕೆ.ಎನ್.ಆರ್. ಅವರನ್ನು ರಾಜಕೀಯವಾಗಿ ಮುಗಿಸಲು ಅವರದೆ ಸಮುದಾಯದವರನ್ನು ಅಭ್ಯರ್ಥಿಯನ್ನಾಗಿಸಿದ್ದು, ಕೆಎಎಸ್ ಅಧಿಕಾರಿಯಾಗಿದ್ದ ಅನಿಲ್ ಕುಮಾರ್ ರವರನ್ನು ರಾಜೀನಾಮೆ ಕೊಡಿಸಿ ಅಂಗೀಕಾರ ಮಾಡುವಂತೆ ಮಾಡಿ ಕೊನೆ ಗಳಿಗೆಯಲ್ಲಿ ಕರೆ ತಂದು ಅಭ್ಯರ್ಥಿಯನ್ನಾಗಿಸಿದ್ದು, ತುಮಕೂರು ಜಿಲ್ಲೆಯಲ್ಲಿ ಪರಿಚಿತರಲ್ಲದ ಅನಿಲ್ ಕುಮಾರ್ ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.
ಇದೇ ರೀತಿ ಎಂ.ವಿ.ವೀರಭದ್ರಯ್ಯ ರವರನ್ನು ಮಧುಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ 2013 ರ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ಹಿಂದಿನ ದಿನ ರಾಜಿನಾಮೆ ಅಂಗೀಕಾರ ಮಾಡುವಂತೆ ಮಾಡಿ, ಚುನಾವಣೆಗೆ ಸ್ಪರ್ಧಿಸಿದಾಗ ಮಧುಗಿರಿ ಕ್ಷೇತ್ರದ ಮತದಾರರು ಸೋಲಿಸಿದ್ದನ್ನು ಸಹ ರಾಜಕಾರಣದಲ್ಲಿ ಮರೆಯುವಂತಿಲ್ಲ. ಆರ್. ರಾಜೇಂದ್ರ ಅವರ ತಾಯಿ ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣನವರು ಮಧುಗಿರಿ ಕ್ಷೇತ್ರದಲ್ಲಿ ಪುತ್ರನ ಪರವಾಗಿ ವ್ಯಾಪಕ ಪ್ರಚಾರ ಮಾಡಿದ್ದಲ್ಲದೆ, ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೆಸರಿಟ್ಟು ಮಾತನಾಡಿಸಿದ್ದರ ಫಲ ಮಧುಗಿರಿಯಲ್ಲಿ ಅಧಿಕ ಮತಗಳು ಬರಲು ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ