ಪ್ರಸಿದ್ಧ ರಾಮೇಶ್ವರಂ ಕೆಫೆ ಪೊಂಗಲ್‌ನಲ್ಲಿ ಸತ್ತ ಜಿರಳೆ ಪತ್ತೆ: ಗ್ರಾಹಕರಿಂದ ಆಕ್ರೋಶ

ಬೆಂಗಳೂರು: 

   ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಗುರುವಾರ ಬೆಳಿಗ್ಗೆ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರೊಬ್ಬರಿಗೆ ನೀಡಿದ ಆಹಾರದಲ್ಲಿ ಜಿರಳೆ ಪತ್ತೆಯಾಗಿದೆ. ಈ ಘಟನೆಯು ಆಹಾರ ಸುರಕ್ಷತೆಯ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. ಗ್ರಾಹಕರು ತಮ್ಮ ಬ್ರೇಕ್‌ಫಾಸ್ಟ್‌ಗಾಗಿ ಪೊಂಗಲ್ ಆರ್ಡರ್ ಮಾಡಿದ್ದರು. ಆಹಾರದಲ್ಲಿ ಹುಳು ಕಂಡುಬಂದಾಗ ಅವರು ಸಿಬ್ಬಂದಿಗೆ ದೂರು ನೀಡಿದರು. ಆರಂಭದಲ್ಲಿ ಸಿಬ್ಬಂದಿ ಘಟನೆಯನ್ನು ಮರೆಮಾಚಲು ಯತ್ನಿಸಿದರೂ, ಗ್ರಾಹಕರು ಆಹಾರದ ವಿಡಿಯೋ ಚಿತ್ರೀಕರಿಸಿದಾಗ ಕ್ಷಮೆಯಾಚಿಸಿ, 300 ರೂ. ಸಂಪೂರ್ಣ ಮರುಪಾವತಿ ನೀಡಿದರು.

   2021ರಲ್ಲಿ ಆರಂಭವಾದ ರಾಮೇಶ್ವರಂ ಕೆಫೆ ಕೆಲವೇ ವರ್ಷಗಳಲ್ಲಿ ನಗರದಲ್ಲಿ ಜನಪ್ರಿಯವಾದ ಹೋಟೆಲ್‌. ಇಲ್ಲಿನ ದೋಸೆ, ತುಪ್ಪದ ಬಳಕೆ, ಉತ್ತಮ ಗುಣಮಟ್ಟದ ಕಾಫಿಗೆ ಹಲವಾರು ಜನರು ಮಾರು ಹೋಗಿದ್ದಾರೆ. ನಗರದಕ್ಕೆ ಆಗಮಿಸುವ ಹಲವಾರು ಜನರು ಈ ಹೋಟೆಲ್‌ಗೆ ತಪ್ಪದೇ ಭೇಟಿ ನೀಡುತ್ತಾರೆ. ಆದರೆ ಇದೀಗ ಹಲವು ಪ್ರಶ್ನೆಗಳು ಎದ್ದಿವೆ.

   ರಾಮೇಶ್ವರಂ ಕೆಫೆ ಈ ಹಿಂದೆ ಕಳೆದ ವರ್ಷ ಮಾರ್ಚ್‌ನಲ್ಲಿ ಬೆಂಗಳೂರಿನ ಒಂದು ಔಟ್‌ಲೆಟ್‌ನಲ್ಲಿ ಸಂಭವಿಸಿದ IED ಸ್ಫೋಟದಿಂದಾಗಿ ಸುದ್ದಿಯಾಗಿತ್ತು. ಇದರಲ್ಲಿ ಹಲವರು ಗಾಯಗೊಂಡಿದ್ದರು. ಇದೇ ರೀತಿಯ ಘಟನೆಗಳು ಇತರೆಡೆಯೂ ವರದಿಯಾಗಿವೆ. ಕಳೆದ ಡಿಸೆಂಬರ್‌ನಲ್ಲಿ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ರೆಡ್ ಪಕೋರಾದಲ್ಲಿ ಜಿರಳೆ ಕಂಡುಬಂದಿತ್ತು. ಇದರ ಜೊತೆಗೆ, ಚಾಕೊಲೇಟ್ ಸಿರಪ್‌ನಲ್ಲಿ ಸತ್ತ ಇಲಿ ಮತ್ತು ಬರ್ಗರ್ ಕಿಂಗ್‌ನ ಬರ್ಗರ್‌ನಲ್ಲಿ ಕೀಟ ಕಂಡುಬಂದ ಘಟನೆಗಳೂ ವರದಿಯಾಗಿವೆ. 

   ಈ ತಿಂಗಳ ಆರಂಭದಲ್ಲಿ, ಮುಂಬೈನ ಆಕಾಶವಾಣಿ ಕ್ಯಾಂಟೀನ್‌ನಲ್ಲಿ ಕೆಟ್ಟ ಗುಣಮಟ್ಟದ ಆಹಾರ ಸರಬರಾಜಾಗುತ್ತಿದೆ ಎಂದು ಬುಲ್ಧಾನದ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಆರೋಪಿಸಿದ್ದರು. ಅವರು ಕ್ಯಾಂಟೀನ್ ಸಿಬ್ಬಂದಿಯನ್ನು ಥಳಿಸಿದರು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾಸಕರ ದೂರಿನ ಆಧಾರದ ಮೇಲೆ, ರಾಜ್ಯದ ಆಹಾರ ಮತ್ತು ಔಷಧ ಆಡಳಿತ (FDA) ಆಕಾಶವಾಣಿ ಕ್ಯಾಂಟೀನ್‌ನ ಆಡಳಿತಗಾರರಾದ ಅಜಂತಾ ಕೇಟರರ್ಸ್‌ನ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತು. FDA ಅಧಿಕಾರಿಗಳು ಕ್ಯಾಂಟೀನ್‌ನಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. 

   ಗಾಯಕ್ವಾಡ್ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಲು ನಿರಾಕರಿಸಿ, “ಕ್ಯಾಂಟೀನ್‌ನ ಆಹಾರ ವಿಷದಂತಿತ್ತು, ನನಗೆ ಯಾವುದೇ ಪಶ್ಚಾತ್ತಾಪವಿಲ್ಲ,” ಎಂದಿದ್ದಾರೆ. ಈ ಘಟನೆಗಳು ಆಹಾರ ಸುರಕ್ಷತೆಯ ಕಾನೂನಿನ ಕಠಿಣ ಜಾರಿಗೆ ಒತ್ತಾಯಿಸಿವೆ.

Recent Articles

spot_img

Related Stories

Share via
Copy link