ಇಂದೋರ್:
ಹಾಸ್ಯನಟ ಸಮಯ್ ರೈನಾ ಅವರ ಯೂಟ್ಯೂಬ್ ರಿಯಾಲಿಟಿ ಶೋ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ‘ಅಶ್ಲೀಲ ಮತ್ತು ಅಸಭ್ಯ’ ಹೇಳಿಕೆ ನೀಡಿದ ಯೂಟ್ಯೂಬರ್ ಮತ್ತು ಪಾಡ್‌ಕಾಸ್ಟರ್ ರಣವೀರ್ ಅಲ್ಹಾಬಾದಿಯಾ ವಿರುದ್ಧ ಮಂಗಳವಾರ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿಲ್ಲ. ಸ್ಥಳೀಯ ವಕೀಲರಾದ ಅಮನ್ ಮಾಳವಿಯಾ ಅವರು ದೂರು ದಾಖಲಿಸಿದ್ದಾರೆ. ದೂರಿನ ಬಗ್ಗೆ ತನಿಖೆ ನಡೆಸಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತುಕೋಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಜಿತೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಅಲ್ಹಾಬಾದಿಯಾ, ಸಮಯ್ ರೈನಾ ಮತ್ತು ಇತರ ಸೆಲೆಬ್ರಿಟಿಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಭ್ಯತೆಯ ಗಡಿ ದಾಟಿದ್ದಾರೆ ಎಂದು ಮಾಳವಿಯಾ ದೂರಿದ್ದಾರೆ.ಅಲ್ಹಾಬಾದಿಯಾ ಮತ್ತು ರೈನಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಆ ಕಾರ್ಯಕ್ರಮವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕೆಲವು ಇತರ ವಕೀಲರು ಮಾಳವಿಯಾ ಅವರೊಂದಿಗೆ ಪೊಲೀಸ್ ಠಾಣೆಗೆ ಬಂದರು.
31 ವರ್ಷದ ಅಲ್ಹಾಬಾದಿಯಾ ಅವರು ಸೋಮವಾರ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ನೀಡಿದ ಪೋಷಕರು ಮತ್ತು ಲೈಂಗಿಕತೆಯ ಬಗೆಗಿನ ಹೇಳಿಕೆಯು ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಅವರ ಹೇಳಿಕೆ ವೈರಲ್ ಆದ ನಂತರ ವಿಡಿಯೋ ಮಾಡಿದ್ದ ಅಲ್ಹಾಬಾದಿಯಾ ಅವರು ಕ್ಷಮೆಯಾಚಿಸಿದ್ದರು ಮತ್ತು ವಿವಾದಾತ್ಮಕ ಭಾಗವನ್ನು ತೆಗೆದುಹಾಕಲು ಕಾರ್ಯಕ್ರಮದ ಆಯೋಜಕರನ್ನು ಕೇಳಿರುವುದಾಗಿ ಹೇಳಿದರು.ಗುವಾಹಟಿ ಪೊಲೀಸರು ಕೂಡ ಸೋಮವಾರ ಅಲ್ಹಾಬಾದಿಯಾ ಮತ್ತು ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
