ಅಧಿಕಾರಿಗಳ ಮುಂದೆ ರನ್ಯಾ ರಾವ್ ತಪ್ಪೊಪ್ಪಿಗೆ

ಬೆಂಗಳೂರು:

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನದ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್, ಬಂಧನದ ನಂತರ ಕಂದಾಯ ಅಧಿಕಾರಿಗಳಿಗೆ ನೀಡಿದ ತಪ್ಪೊಪ್ಪಿಗೆಯಲ್ಲಿ ದುಬೈನಿಂದ ’17 ಚಿನ್ನದ ಗಟ್ಟಿಗಳನ್ನು’ ತಂದಿದ್ದಾಗಿ ಒಪ್ಪಿಕೊಂಡಿದ್ದಾರೆ.ನಟಿ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆ ಸೋರಿಕೆಯಾಗಿದ್ದು, ಮಧ್ಯಪ್ರಾಚ್ಯ, ದುಬೈ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳನ್ನು ಒಳಗೊಂಡಂತೆ ತಮ್ಮ ಅಂತರರಾಷ್ಟ್ರೀಯ ಪ್ರವಾಸಗಳ ವಿವರಗಳನ್ನು ಸಹ ಬಹಿರಂಗಪಡಿಸಿದ್ದಾರೆ.

    ‘ನಾನು ಯುರೋಪ್, ಅಮೆರಿಕ ಮತ್ತು ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸಿದ್ದೇನೆ ಮತ್ತು ದುಬೈ, ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದೇನೆ. ಈ ನಡುವೆ ನನಗೆ ವಿಶ್ರಾಂತಿ ಸಿಗದೆ ನಾನು ಸದ್ಯ ದಣಿದಿದ್ದೇನೆ ಎಂದು ನಾನು ಹೇಳಲು ಬಯಸುತ್ತೇನೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

   ದುಬೈನ ಚಿನ್ನ ಕಳ್ಳಸಾಗಣೆ ಜಾಲದಲ್ಲಿ ಕನ್ನಡದ ನಟಿಯೊಬ್ಬರು ಸಕ್ರಿಯರಾಗಿರುವ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಕೆಲ ದಿನಗಳ ಹಿಂದಷ್ಟೇ ಮಾಹಿತಿ ದೊರೆತಿತ್ತು. ಪದೇ ಪದೆ ದುಬೈಗೆ ಹೋಗಿ ಬರುತ್ತಿದ್ದ ರನ್ಯಾ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದರು. ಕಳೆದ 15 ದಿನಗಳಲ್ಲಿ ರನ್ಯಾ ರಾವ್ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದರು. ರನ್ಯಾ ರಾವ್ ಅವರು ಕಳೆದ ವರ್ಷ 27 ಬಾರಿ ದುಬೈ ಪ್ರವಾಸ ಕೈಗೊಂಡಿದ್ದರು.

  ಹೇಳಿಕೆಯಲ್ಲಿ ತಮ್ಮ ಕುಟುಂಬದ ವಿವರಗಳನ್ನು ಸಹ ಬಹಿರಂಗಪಡಿಸಿರುವ ನಟಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಅವರ ತಂದೆ ಕೆಎಸ್ ಹೆಗ್ಡೇಶ್ ಮತ್ತು ವಾಸ್ತುಶಿಲ್ಪಿಯಾಗಿರುವ ತಮ್ಮ ಪತಿ ಜತಿನ್ ಹುಕ್ಕೇರಿ ಬೆಂಗಳೂರಿನಲ್ಲಿ ತಮ್ಮೊಂದಿಗೆ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

   ಪೊಲೀಸ್ ಮಹಾನಿರ್ದೇಶಕ (ಪೊಲೀಸ್ ವಸತಿ ನಿಗಮ) ರಾಮಚಂದ್ರ ರಾವ್ ಅವರು ರನ್ಯಾ ರಾವ್ ಅವರ ಮಲತಂದೆ. ರಾಮಚಂದ್ರ ರಾವ್ ಅವರ ಎರಡನೇ ಪತ್ನಿಯ ಮೊದಲನೇ ಮದುವೆಯಿಂದ ಜನಿಸಿದ ಇಬ್ಬರು ಹೆಣ್ಣುಮಕ್ಕಳಲ್ಲಿ ರನ್ಯಾ ಕೂಡ ಒಬ್ಬರು.ದುಬೈನಿಂದ ಸೋಮವಾರ (ಮಾ.3) ರಾತ್ರಿ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ತಪಾಸಣೆ ಮಾಡಿದಾಗ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ಬಳಿಕ ನಟಿಯನ್ನು ಬಂಧಿಸಲಾಗಿತ್ತು. 

   ರನ್ಯಾ ಅವರ ಲ್ಯಾವೆಲ್ಲೆ ರಸ್ತೆಯಲ್ಲಿರುವ ಐಷಾರಾಮಿ ಫ್ಲಾಟ್‌ ಮೇಲೆ ದಾಳಿ ನಡೆಸಿದ ವೇಳೆ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 2.67 ಕೋಟಿ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಫ್ಲಾಟ್‌ಗೆ ನಟಿ 4.5 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರು ಎಂದು ಎಂದು ವರದಿಯಾಗಿದೆ.

   ಚಿಕ್ಕಮಗಳೂರಿನವರಾದ ರನ್ಯಾ ಅವರು 2014ರಲ್ಲಿ ಕಿಚ್ಚ ಸುದೀಪ್ ನಟನೆಯ ‘ಮಾಣಿಕ್ಯ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಟಾಕಿ ಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ ತಮಿಳು ಸಿನಿಮಾದಲ್ಲಿಯೂ ರನ್ಯಾ ಬಣ್ಣ ಹಚ್ಚಿದ್ದಾರೆ.

Recent Articles

spot_img

Related Stories

Share via
Copy link