ಮುಂಬೈ:
ಕಳೆದ ತಿಂಗಳು ವಿಶ್ವಾದ್ಯಂತ ತೆರೆಕಂಡ ಟಾಲಿವುಡ್ ಕಮರ್ಶಿಯಲ್ ಚಿತ್ರಗಳ ನಿರ್ದೇಶಕ ಸುಕುಮಾರ್ ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ‘ಪುಷ್ಪ 2’ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ರಿಲೀಸ್ ಆಗಿ ಒಂದೂವರೆ ತಿಂಗಳಾಗಿದ್ದು, ಈಗಲೂ ಕೋಟಿ ಕೋಟಿ ರೂ. ದೋಚುತ್ತಿದೆ. ಜಾಗತಿಕವಾಗಿ 1,700 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 2021ರಲ್ಲಿ ತೆರೆಕಂಡ ‘ಪುಷ್ಪ’ ಚಿತ್ರದ ಸೀಕ್ವೆಲ್ ಆಗಿರುವ ಇದು ಕನ್ನಡ, ತೆಲುಗು ಸೇರಿದಂತೆ ಎಲ್ಲ ಭಾಷೆಗಳಲ್ಲಿಯೂ ಮೋಡಿ ಮಾಡಿದೆ. ಈ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ಒಂದರ ಹಿಂದೆ ಒಂದರಂತೆ ಬಾಲಿವುಡ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರುವ ಅವರ ಮುಂಬರುವ ಹಿಂದಿ ಸಿನಿಮಾ ʼಛಾವಾʼ ದ ಪೋಸ್ಟರ್ ಇದೀಗ ರಿಲೀಸ್ ಆಗಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ತೆರೆ ಮೇಲೆ ಮೊದಲ ಬಾರಿ ಒಂದಾಗುತ್ತಿರುವ ಚಿತ್ರ ʼಛಾವಾʼ. ಈ ಚಿತ್ರದಲ್ಲಿ ರಶ್ಮಿಕಾ ಮಹಾರಾಣಿ ಯೆಸುಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀರೆ ಸುತ್ತಿ, ಮೈತುಂಬಾ ಒಡೆವೆ ತೊಟ್ಟು ಥೇಟ್ ರಾಣಿಯಂತೆ ಕಂಗೊಳಿಸಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ನ್ಯಾಷನ್ ಕ್ರಶ್ ಎನ್ನುವುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ಎಂದು ಹಲವರು ಹಾಡು ಹೊಗಳಿದ್ದಾರೆ.
ಐತಿಹಾಸಿಕ ಕಥೆಯನ್ನು ಒಳಗೊಂಡ ʼಛಾವಾʼ ಚಿತ್ರ ಛತ್ರಪತಿ ಸಂಭಾಜಿ ರಾಜರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ರಶ್ಮಿಕಾ ಮಂದಣ್ಣ ಅವರ ಪೋಸ್ಟರ್ ಹಂಚಿಕೊಂಡ ಚಿತ್ರತಂಡ, ʼʼಪ್ರತಿ ಅಪ್ರತಿಮ ರಾಜನ ಹಿಂದೆ ಧೈರ್ಯವಂತ ರಾಣಿ ಇರುತ್ತಾಳೆ. ಸ್ವರಾಜ್ಯದ ಹೆಮ್ಮೆಯ ಮಹಾರಾಣಿ ಯೆಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ʼಛಾವಾʼ ಟ್ರೈಲರ್ ಜ. 22ರಂದು ರಿಲೀಸ್ ಆಗಲಿದೆ. ಚಿತ್ರ ಫೆ. 14ರಂದು ತೆರೆಗೆ ಬರಲಿದೆʼʼ ಎಂದು ಬರೆದುಕೊಂಡಿದೆ.
2016ರಲ್ಲಿ ರಿಲೀಸ್ ಆದ ʼಕಿರಿಕ್ ಪಾರ್ಟಿʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಈ 9 ವರ್ಷಗಳಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಪಾತ್ರಗಳಲ್ಲಿ ಅಭಿನಯಿಸಿರುವ ಅವರು ಇದೇ ಮೊದಲ ಬಾರಿಗೆ ಐತಿಹಾಸಿಕ ಕ್ಯಾರಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರ ಕುತೂಹಲ ಕೆರಳಿದ್ದು, ರಶ್ಮಿಕಾ ಮಂದಣ್ಣಗೆ ಮತ್ತೊಂದು ದೊಡ್ಡ ಮಟ್ಟದ ಗೆಲುವು ಸಿಗಲಿದೆ ಎಂದೇ ಫ್ಯಾನ್ಸ್ ಭವಿಷ್ಯ ನುಡಿಯುತ್ತಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಪುತ್ರ ಸಂಭಾಜಿ ಮಹಾರಾಜ ತಂದೆಯಂತೆಯೇ ಅಪ್ರತಿಮ ಸಾಹಸಿ. ಅವರ ಶೌರ್ಯ ಮತ್ತು ಪರಾಕ್ರಮವನ್ನು ಈ ಚಿತ್ರದಲ್ಲಿ ಕಟ್ಟಿ ಕೊಡಲಾಗುತ್ತದೆ. ಸಂಭಾಜಿ ಮಹಾರಾಜರ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ. ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸುತ್ತಿದೆ. ಎ.ಆರ್.ರೆಹಮಾನ್ ಸಂಗೀತ ನೀಡುತ್ತಿದ್ದಾರೆ.
ಹಾಗೆ ನೋಡಿದರೆ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಈ ಹಿಂದೆಯೂ ತೆರೆ ಹಂಚಿಕೊಂಡಿದ್ದಾರೆ. ಆದರೆ ಇವರು ಒಂದಾಗಿದ್ದು ಚಿತ್ರಕ್ಕಾಗಿ ಅಲ್ಲ. ಜಾಹೀರಾತಿನಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಇದೀಗ ʼಛಾವಾʼ ಚಿತ್ರದಲ್ಲಿ ಈ ಜೋಡಿ ಒಂದಾಗುತ್ತಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಗರಿಗೆದರಿದೆ. ಸದ್ಯ ಕಾಲಿಗೆ ಪೆಟ್ಟು ಮಾಡಿಕೊಂಡಿರುವ ರಶ್ಮಿಕಾ ವಿಶ್ರಾಂತಿಯಲ್ಲಿದ್ದಾರೆ. ಶೀಘ್ರದಲ್ಲೇ ಚಿತ್ರದ ಪ್ರಮೋಷನ್‌ನಲ್ಲಿ ಭಾಗವಹಿಸಲಿದ್ದಾರೆ.
