ಬೆಂಗಳೂರು
ಏಪ್ರಿಲ್-ಡಿಸೆಂಬರ್ ನಡುವಿನ 8 ತಿಂಗಳ ಅವಧಿಯಲ್ಲಿ ನಗರದಲ್ಲಿನ 16,940 ರಸ್ತೆ ಗುಂಡಿಗಳ ಪೈಕಿ 9,442 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಹಿತಿ ನೀಡಿದೆ.ರಸ್ತೆ ಗುಂಡಿ ಗಮನ ಆ್ಯಪ್ ನಲ್ಲಿ ಒಂದು ಗುಂಡಿಗಳ ಬಗ್ಗೆ ಹಲವು ದೂರುಗಳು ಬಂದಿವೆ. ಹೀಗಾಗಿ, ಆ ದೂರುಗಳನ್ನು ರಿಜೆಕ್ಟೆಟ್ ವರ್ಗದ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5,212 ಗುಂಡಿಗಳ ದೂರುಗಳು ಪುನರಾವರ್ತಿತವಾಗಿರುವುದರಿಂದ ಅವುಗಳನ್ನು ತಿರಸ್ಕರಿಸಲಾಗಿದೆ. ಇದೀಗ ಪಾಲಿಕೆ 1,974 ಗುಂಡಿಗಳ ಸರಿಪಡಿಸುವ ಕಾರ್ಯ ಕೈಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ. ಎಂಟು ವಲಯಗಳಲ್ಲಿ 32,200 ಚದರ ಮೀಟರ್ ರಸ್ತೆಗಳಲ್ಲಿ ಗುಂಡಿಗಳನ್ನು ಸರಿಪಡಿಸಲು ಬಿಬಿಎಂಪಿ ವಾರ್ಷಿಕವಾಗಿ ಸುಮಾರು 45 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ರಸ್ತೆ ಗುಂಡಿಗಳ ಸರಿಪಡಿಸಲು ಹಾಗೂ ರಸ್ತೆ ದುರಸ್ತಿಗೆ ಪ್ರತಿ ವಾರ್ಡ್‌ಗೆ 15 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಹೇಳಿದ್ದರು. ಹದಗೆಟ್ಟ ರಸ್ತೆ, ರಸ್ತೆ ಗುಂಡಿಗಳ ಬಗ್ಗೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆ ನಡೆಸಿದ್ದರು.
659.71 ಕೋಟಿ ವೆಚ್ಚದಲ್ಲಿ 1,611 ಕಿಮೀ ಉದ್ದದ ರಸ್ತೆ ಡಾಂಬರೀಕರಣವನ್ನು ನವೆಂಬರ್‌ನಲ್ಲಿ ಕೈಗೆತ್ತಿಕೊಂಡು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಿಎಂಗೆ ಬಿಬಿಎಂಪಿ ಆಯುಕ್ತರು ವಿವರಿಸಿದ್ದರು. ಅದರಂತೆ ಹಲವು ರಸ್ತೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಡಿಸೆಂಬರ್‌ನಲ್ಲಿಯೂ ಮಳೆ ಮುಂದುವರಿದಿದ್ದರಿಂದ ಗುಂಡಿ ಸರಿಪಡಿಸುವ ಕೆಲಸದಲ್ಲಿ ವಿಳಂಬವಾಗಿದೆ. ತ್ವರಿತ ಪರಿಹಾರಕ್ಕಾಗಿ ಮತ್ತು ತಾತ್ಕಾಲಿಕ ಪರಿಹಾರವಾಗಿ ವೆಟ್ ಮಿಕ್ಸ್ ಮತ್ತು ಇಕೋಫಿಕ್ಸ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈಗ ಮಳೆ ನಿಂತಿರುವುದರಿಂದ ರಸ್ತೆ ಡಾಂಬರೀಕರಣ ಕಾಮಗಾರಿ ಚುರುಕುಗೊಳ್ಳಲಿದೆ ಎಂದು ತಿಳಿಸಿದ್ದಾರೆ.
