ನಮಗೆ ಭಾಷೆ ಮೊದಲು ಆಟ ಏನಿದ್ದರೂ ಆಮೇಲೆ : RCB FANS

ಬೆಂಗಳೂರು: 

     ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ಕೆಎಲ್​ ರಾಹುಲ್​ ಸಹಿತ ಕರ್ನಾಟಕದ ಪ್ರಮುಖ ಕ್ರಿಕೆಟಿಗರನ್ನು ಕಡೆಗಣಿಸಿದ ಬೆನ್ನಲ್ಲೇ, ಹಿಂದಿ ಹೇರಿಕೆಗೆ ಮುಂದಾಗಿರುವುದು ಕನ್ನಡಿಗರನ್ನು ಕೆರಳಿಸಿದೆ. ಬೆಂಗಳೂರು ಎಂದರೆ ಕನ್ನಡ ಸಂಸತಿ ಮತ್ತು ಭಾಷೆ. ಹೀಗಾಗಿ ಆರ್​ಸಿಬಿ ತಂಡ ಸ್ಥಳಿಯ ಭಾಷೆಯನ್ನು ಬಳಸಬೇಕು. ಅದು ಬಿಟ್ಟು ಹಿಂದಿ ಹೇರಿಕೆ ಮಾಡುವುದಲ್ಲ. ತಕ್ಷಣ ಈ ಖಾತೆಯನ್ನು ಅಳಿಸಿ ಹಾಕದಿದ್ದರೆ ಬೆಂಗಳೂರಿನಲ್ಲಿ ಪಂದ್ಯ ಆಡದಂತೆ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನ ಆರ್‌ಸಿಬಿ ತಂಡ ಹಿಂದಿ ಪೇಜ್ ಆರಂಭಿಸುವ ಅವಶ್ಯಕತೆ ಏನಿತ್ತು? ಇದು ಹಿಂದಿ ಹೇರಿಕೆಯ ಮೊದಲ ಹೆಜ್ಜೆ . ಬೆಂಗಳೂರಿನಲ್ಲಿ ಹಲವು ಕ್ರೀಡಾ ಫ್ರಾಂಚೈಸಿಗಳಿವೆ ಆದರೆ ಇವೆಲ್ಲ ಕನ್ನಡಿಗರು, ಕನ್ನಡ ಭಾಷೆ, ಕ್ರೀಡೆಗೆ ಗೌರವ ನೀಡುತ್ತಿದೆ. ಆರ್‌ಸಿಬಿ ಮಾತ್ರ ಹಿಂದಿಗಾಗಿ ಹೊಸ ಪೇಜ್ ಆರಂಭಿಸಿರುವುದು ಏಕೆ? ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.

   ಆರ್‌ಸಿಬಿಯ ಮೂಲ ಎಕ್ಸ್(ಟ್ವಿಟರ್) ಪೇಜ್ Royal Challengers Bengaluru ಹೆಸರಿನ @RCBTweets ಮುಖ್ಯ ಖಾತೆಯಾಗಿದೆ. ಇಲ್ಲಿ ಇಂಗ್ಲೀಷ್‌ನಲ್ಲಿ ಟ್ವೀಟ್ ಮಾಡಲಾಗುತ್ತದೆ. ಇನ್ನು ಕನ್ನಡದಲ್ಲಿ ಪೋಸ್ಟ್ ಮಾಡಲು ಆರ್‌ಸಿಬಿ Royal Challengers Bengaluru Kannada ಅನ್ನೋ ಹೆಸರಿನ @RCBinKannada ಖಾತೆ ಆರಂಭಿಸಿದೆ. ಈ ಪೇಜ್‌ನಲ್ಲಿ ಕನ್ನಡದಲ್ಲಿ ಟ್ವೀಟ್ ಮಾಡಲಾಗುತ್ತಿದೆ.

   ಇದರ ಜತೆಗೆ ಹಿಂದಿಯಲ್ಲಿ ಟ್ವೀಟ್ ಮಾಡಲು ಹೊಸ ಹಿಂದಿ ಖಾತೆಯನ್ನೂ ಆರಂಭಿಸಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗ ಆಟಗಾರರಿಗೆ ಮಾತ್ರವಲ್ಲದೆ. ಕನ್ನಡ ಭಾಷೆಗೂ ಆರ್‌ಸಿಬಿ ಅವಮಾನ ಮಾಡುತ್ತಿದ್ದೆ. ಹಿಂದಿ ಆಟಗಾರರು ಮತ್ತು ಆ ಭಾಷೆ ನಿಮಗೆ ಮುಖ್ಯವಾದರೆ ಬೆಂಗಳೂರು ಎಂಬ ಹೆಸರನ್ನು ಕೈ ಬಿಟ್ಟು ಕೇವಲ ರಾಯಲ್‌ ಚಾಲೆಂಜರ್ಸ್‌ ಎಂದು ಮಾತ್ರ ಹೆಸರಿಡಿ ಎಂದಿದ್ದಾರೆ.

   ಬೆಂಗಳೂರು ಎಫ್‌ಸಿ ಫುಟ್ಬಾಲ್ ತಂಡದ ಎಕ್ಸ್ ಖಾತೆ ಹಾಗೂ ಬೆಂಗಳೂರು ಬುಲ್ಸ್ ಪ್ರೋ ಕಬಡ್ಡಿ ತಂಡದ ಎಕ್ಸ್ ಖಾತೆ ಕನ್ನಡದವನ್ನು ಬಳಸುತ್ತಿದೆ, ಹೀಗಿರುವ ಕ್ರಿಕೆಟ್‌ ತಂಡಕ್ಕೆ ಮಾತ್ರ ಹಿಂದಿ ಖಾತೆ ಏಕೆ ಎಂದು ಅಭಿಮಾನಿಗಳು ಫ್ರಾಂಚೈಸಿಗೆ ಪ್ರಶ್ನೆ ಮಾಡಿದ್ದಾರೆ. 

   ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಟ್ವೀಟ್‌ ಮಾಡಿ ಆರ್‌ಸಿಬಿ ವಿರುದ್ಧ ಕಿಡಿ ಕಾರಿದ್ದಾರೆ. ʼನಿಮಗೆ ಬೆಂಬಲ ಕೊಡ್ತಿರೋದು ಬೆಂಗಳೂರು ಅನ್ನೋ ಹೆಸರಿಗೆ. ನಮ್ಮ ತಂಡ ಅಂತ ಪ್ರಾಣ ಕೊಟ್ಟು ಪ್ರೀತಿಸೋ ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ನಿಮ್ಮ ಐಪಿಎಲ್ ಕಪ್,ಆರ್‌ಸಿಬಿ ಗಿಂತಲೂ ನಮಗೆ ನಮ್ಮ ಕನ್ನಡ, ಕನ್ನಡ ನೆಲದ ಸ್ವಾಭಿಮಾನವೆ ಹೆಚ್ಚು. ತಕ್ಷಣ ಹಿಂದಿ ಖಾತೆಯನ್ನು ಅಳಿಸಿ.

   ಅಭಿಮಾನಿಗಳು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಆರ್‌ಸಿಬಿ ಫ್ರಾಂಚೈಸಿ ಇದಕ್ಕೆ ಕ್ಯಾರೆ ಎಂದಿಲ್ಲ. ಅಲ್ಲದೆ ಹಿಂದಿ ಖಾತೆಯ ಬಗ್ಗೆ ಆರ್​ಸಿಬಿ ವಲಯದಿಂದ ಸಮರ್ಥನೆಯೂ ಬಂದಿದ್ದು, ಆರ್​ಸಿಬಿ ತಂಡ ಬರೀ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಅಭಿಮಾನಿಗಳನ್ನು ಹೊಂದಿದೆ. ಹೀಗಾಗಿ ಹೆಚ್ಚಿನ ಜನರನ್ನು ತಲುಪುವ ಸಲುವಾಗಿ ಹಿಂದಿ ಭಾಷೆಯನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಲಾಗಿದೆ. ಒಟ್ಟಾರೆ ಫ್ರಾಂಚೈಸಿ ವಿರುದ್ಧವೇ ಅಭಿಮಾನಿಗಳು ತಿರುಗಿ ಬಿದ್ದಿರುವ ಕಾರಣ ಈ ಬಾರಿ ಆರ್‌ಸಿಬಿ ಪಂದ್ಯಕ್ಕೆ ಕ್ರೇಜ್‌ ಕಡಿಮೆಯಾಗುವ ಸಾಧ್ಯತೆ ಇದೆ. ಕನ್ನಡ ಪರ ಸಂಘಟನೆಗಳು ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ಪ್ರತಿಭಟನೆ ಮಾಡುವ ಸಾಧ್ಯತೆಯೂ ಕಂಡು ಬಂದಿದೆ.