ಬೆಂಗಳೂರು:
ಕರ್ನಾಟಕದಲ್ಲಿ ಬೇಸಿಗೆ ಧಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಂಗಳವಾರ ಉದ್ಯಾನ ನಗರಿಯಲ್ಲಿ ತಾಪಮಾನ ಗರಿಷ್ಠ 37.2 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ತಾಪಮಾನ ದಿನೇ ದಿನೇ ಗರಿಷ್ಟ ಮಟ್ಟಕ್ಕೇರುತ್ತಿದ್ದು, ಮಂಗಳವಾರ ಬೆಂಗಳೂರಿನಲ್ಲಿ ದಾಖಲೆಯ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಈ ವರ್ಷ ಬೆಂಗಳೂರಿನಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಅಂದರೆ 37.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರು ಮಾತ್ರವಲ್ಲದೇ ತುಮಕೂರು, ಚಾಮರಾಜನಗರ, ಮೈಸೂರು, ಬಳ್ಳಾರಿ, ರಾಯಚೂರು, ಚಿತ್ರದುರ್ಗ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಕರ್ನಾಟಕದ ಒಳನಾಡಿನ ಬಹುತೇಕ ಭಾಗಗಳಲ್ಲಿ ಬಿಸಿಗಾಳಿ ಸಾಮಾನ್ಯ ಎಂಬಂತಾಗಿದೆ. ಮುಂದಿನ 3-4 ದಿನಗಳು ರಾಜ್ಯದ ಪಾಲಿಗೆ ನಿರ್ಣಾಯಕವಾಗಿದ್ದು, ಹೆಚ್ಚಿನ ಸ್ಥಳಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವಿಜ್ಞಾನಿ ಎ ಪ್ರಸಾದ್ ಮುನ್ಸೂಚನೆ ನೀಡಿದ್ದಾರೆ.
ಏಪ್ರಿಲ್ ಮಧ್ಯಭಾಗದಲ್ಲಿ ತಾಪಮಾನ ಏರಿಕೆಯಲ್ಲಿ ಬಿಡುವು ದೊರೆಯಲಿದ್ದು, ಈ ಹಂತದಲ್ಲಿ ತಾಪಮಾನದಲ್ಲಿ ಕುಸಿತ ಕಾಣಬಹುದು. ಏಪ್ರಿಲ್ 6 ರಿಂದ ಲಘು ಮಳೆಯ ಮುನ್ಸೂಚನೆ ಇದೆ. ಏಪ್ರಿಲ್ 6 ರಂದು ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಕೊಡಗು, ಚಿಕ್ಕಮಗಳೂರು, ಮಂಡ್ಯ ಮತ್ತು ಏಪ್ರಿಲ್ ರಂದು 7 ಮೈಸೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮಾರ್ಚ್ ಕೊನೆಯ ವಾರದಲ್ಲಿ ನಿರೀಕ್ಷೆಯಂತೆ ಬೆಂಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿಯೂ ಕೂಡ ಮಳೆಯಾಗಲಿಲ್ಲ. ಇದಕ್ಕೆ ಕಾರಣ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿರುವುದು. ತಮಿಳುನಾಡು ಮತ್ತು ಮಹಾರಾಷ್ಟ್ರದ ನಡುವೆ ಗಾಳಿ ಸ್ಥಗಿತಗೊಂಡಿದೆ ಎಂದು ಐಎಂಡಿಯ ಹಿರಿಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಐದು ದಿನಗಳಲ್ಲಿ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ ಬುಧವಾರ ತಿಳಿಸಿದೆ. ಇದರ ಜೊತೆಗೆ ಏಪ್ರಿಲ್ ಎರಡನೇ ವಾರದಿಂದ ಬೆಂಗಳೂರಿನಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಕೂಡ ಸಂಸ್ಥೆ ನೀಡಿದೆ. ಬೆಂಗಳೂರು ಏಪ್ರಿಲ್‌ನಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆಯಾಗಬಹುದು ಎಂದು ಹೇಳಿದೆ.