6 ವರ್ಷದ ಬಳಿಕ ಟೈರ್​ನಿಂದ ಮೊಸಳೆಗೆ ಬಿಡುಗಡೆ! ಸರ್ಕಾರದಿಂದ ಆಗದ ಕೆಲ್ಸವನ್ನು ಈತನೊಬ್ಬನೇ ಸಾಧಿಸಿದ್ಹೇಗೆ?

ಜಕಾರ್ತ:

 ಮೋಟರ್​ ಬೈಕ್​ ಟೈರ್​ ಕೊರಳಿಗೆ ಸಿಲುಕಿ ಕಳೆದ ಆರು ವರ್ಷಗಳಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದ ಉಪ್ಪು ನೀರಿನ ಮೊಸಳೆಯನ್ನು ಕೊನೆಗೂ ಟೈರ್​ನಿಂದ ಮುಕ್ತಗೊಳಿಸಲಾಗಿದೆ. ಇಂಡೋನೇಷ್ಯಾದ ದಿಟ್ಟ ಗ್ರಾಮಸ್ಥನೊಬ್ಬ ಸಾಹಸ ಮೆರೆದು ಮೊಸಳೆಯ ಕತ್ತಿನಲ್ಲಿದ್ದ ಟೈರ್ ಅನ್ನು ತೆಗೆದಿದ್ದಾನೆ.

ಕೋಳಿಯ ಮೂಲಕ ಮೊಸಳೆಗೆ ಬಲೆ ಬೀಸಿ, ಅದನ್ನು ಸೆರೆಹಿಡಿದು ಕತ್ತಿನಲ್ಲಿದ್ದ ಟೈರ್​ ಅನ್ನು ತೆಗೆಯುವಲ್ಲಿ ಗ್ರಾಮಸ್ಥ ಯಶಸ್ವಿಯಾಗಿದ್ದಾನೆ. ಈ ವಿಚಾರವನ್ನು ಸ್ಥಳೀಯ ಅಧಿಕಾರಿಗಳು ಮತ್ತು ನಿವಾಸಿಗಳು ಮಂಗಳವಾರ ಖಚಿತಪಡಿಸಿದ್ದಾರೆ. ಟೈರ್​ ಅನ್ನು ತೆಗೆದು ಮೊಸಳೆಯನ್ನು ಮತ್ತೆ ನೀರಿಗೆ ಬಿಡಲಾಗಿದೆ.

ಸುಲಾವೆಸಿ ದ್ವೀಪದ ಪಲು ನಗರದ ನಿವಾಸಿಗಳು 2016ರಲ್ಲಿ ಬೈಕ್​ ಟೈರ್​ ಕತ್ತಿಗೆ ಸಿಲುಕಿಕೊಂಡಿದ್ದ ಮೊಸಳೆಯನ್ನು ನೋಡಿದ್ದರು. ಅಂದಿನಿಂದಲೂ ಇಂಡೋನೇಷ್ಯಾದ ಸಂರಕ್ಷಣಾ ಕಾರ್ಯಕರ್ತರು ಟೈರ್​ ಬಿಡಿಸಲು ಸತತ ಪ್ರಯತ್ನ ನಡೆಸುತ್ತಿದ್ದರು. ಅದು ಈವರೆಗೂ ಸಫಲವಾಗಿರಲಿಲ್ಲ.

ಆದರೆ, ಸ್ಥಳೀಯ ನಿವಾಸಿಯೊಬ್ಬರು 17 ಅಡಿ ಉದ್ದದ ಸರೀಸೃಪವನ್ನು ತಮ್ಮ ಬುದ್ಧಿವಂತಿಕೆ ಉಪಯೋಗಿಸಿ ಬಲೆಗೆ ಬೀಳಿಸಿದ್ದಾರೆ. ಮೊಸಳೆಯು ಮಧ್ಯ ಸುಲವೆಸಿಯ ಪಲು ನದಿಯಲ್ಲಿ ನಿತ್ಯವು ಸೂರ್ಯನ ಸ್ನಾನ ಮಾಡಲು ಬರುತ್ತಿತ್ತು. ಈ ವೇಳೆ ಅದರ ಚಿತ್ರವನ್ನು ಸೆರೆಹಿಡಿದ ಬಳಿಕ ಫೋಟೋಗಳು ವೈರಲ್​ ಆಗಿದ್ದವು. ಸೋಮವಾರ ತಡರಾತ್ರಿ ಮೊಸಳೆಯನ್ನು ಸೆರೆಹಿಡಿದು ರಕ್ಷಣೆ ಮಾಡಲಾಗಿದೆ.

34 ವರ್ಷದ ಪಕ್ಷಿ ಮಾರಾಟಗಾರ ಟಿಲಿ ಎಂಬಾತ ಕೋಳಿಯನ್ನು ರೋಪ್​ ಒಂದರ ಹುಕ್ಕಿನಲ್ಲಿ ಸಿಗಿಸಿ ಮೊಸಳೆಗೆ ಬಲೆ ಬೀಸಿದ್ದ. ಕೋಳಿ ತಿನ್ನುವ ಆಸೆಯಿಂದ ಬಾಯಿ ಹಾಕಿದ ಮೊಸಳೆ ಹುಕ್ಕಿಗೆ ಸಿಲುಕಿತ್ತು ಅದನ್ನು ಸ್ಥಳೀಯರ ನೆರವಿನಿಂದ ಟಿಲಿ ದಡಕ್ಕೆ ಎಳೆದು ಅದರ ಕತ್ತಿನಲ್ಲಿದ್ದ ಟೈರ್​ ಅನ್ನು ಕತ್ತರಿಸಿ ರಕ್ಷಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥ ನಾನು ಸಹಾಯ ಮಾಡಲು ಬಯಸುತ್ತೇನೆ. ಪ್ರಾಣಿಗಳು ಸಿಕ್ಕಿಬಿದ್ದು, ಬಳಲುತ್ತಿರುವುದನ್ನು ನಾನು ದ್ವೇಷಿಸುತ್ತೇನೆಂದು ಎಎಫ್​ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಆರಂಭದಲ್ಲಿ ಎರಡು ಬಾರಿ ಪ್ರಯತ್ನ ವಿಫಲವಾಗಿತ್ತು. ಹಗ್ಗ ಬಲವಾಗಿ ಇಲ್ಲದಿದ್ದರಿಂದ ಎರಡು ಪ್ರಯತ್ನ ಕೈಕೊಟ್ಟಿತ್ತು. ಬಳಿಕ ನೈಲಾನ್​ ಹಗ್ಗವನ್ನು ದೋಣಿಗೆ ಅಳವಡಿಸಿ ಮೊಸಳೆಯನ್ನು ಸೆರೆಹಿಡಿದಿದ್ದಾರೆ.

ಮೊಸಳೆಯನ್ನು ರಕ್ಷಿಸಿದವರಿಗೆ ಒಳ್ಳೆಯ ಬಹುಮಾನ ನೀಡುವುದಾಗಿ ಇಂಡೋನೇಷ್ಯಾ ಸರ್ಕಾರ ಈ ಹಿಂದೆಯೇ ಘೋಷಿಸಿತ್ತು. ಸ್ಥಳೀಯ ಅಧಿಕಾರಿಗಳು ಟೈರ್​ ತೆಗೆಯುವ ಸಾಕಷ್ಟು ಪ್ರಯತ್ನಗಳನ್ನು ಮಾಡಿ ವಿಫಲವಾಗಿದ್ದರು.

ಅನೇಕ ವರ್ಷದಿಂದ ಮೊಸಳೆ ಈ ಸಮಸ್ಯೆಯನ್ನು ಎದುರಿಸುತ್ತಿತ್ತು. ಆದರೆ ಇತ್ತೀಚೆಗೆ ಮೊಸಳೆಯು ಬಾಯಿ ತೆರೆದು ಉಸಿರಾಡಲು ಶ್ರಮಪಡುತ್ತಿದ್ದ ವಿಡಿಯೋವೊಂದು ಬೆಳಕಿಗೆ ಬಂದ ಮೇಲೆ ಎಚ್ಚೆತ್ತ ಅಧಿಕಾರಿಗಳು ಹೀಗೆ ಬಿಟ್ಟರೆ ಟೈರ್​ ನಿಧಾನವಾಗಿ ಪ್ರಾಣಿಯನ್ನು ಕೊಂದು ಬಿಡುತ್ತದೆ ಎಂಬುದನ್ನು ಮನಗಂಡು, ಹೇಗಾದರೂ ಮಾಡಿ ಟೈರ್​ ತೆಗೆಯಲೇಬೇಕೆಂಬ ನಿರ್ಧಾರಕ್ಕೆ ಬಂದು ಬಹುಮಾನ ಘೋಷಣೆ ಮಾಡಿದ್ದರು.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap