ಬೆಂಗಳೂರು:
ರಾಜ್ಯದಲ್ಲಿ ಮಳೆ, ನೆರೆಯಿಂದಾದ ಹಾನಿ ಸಂಬಂಧ ಕೇಂದ್ರಕ್ಕೆ ತಂಡವೊಂದನ್ನು ಕಳುಹಿಸಿಕೊಡಲು ಪತ್ರ ಬರೆದಿದ್ದು, ನಮ್ಮಿಂದಲೂ ಸಮೀಕ್ಷೆ ನಡೆಸಿದ್ದು, ಕೇಂದ್ರಕ್ಕೆ ನಷ್ಟದ ವಿಸ್ತøತ ವರದಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವೀರಶೈವ ಲಿಂಗಾಯಿತ ಮಹಾವೇದಿಕೆ ವತಿಯಿಂದ ಸೋಮವಾರ ಸಿದ್ಧಗಂಗಾಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಗದ್ದುಗೆಗೆ ಏರ್ಪಡಿಸಿದ್ಧ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ
ಪಾಲ್ಗೊಂಡು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಡಿಸಿಗಳ ಬಳಿ 685 ಕೋಟಿರೂ.ಲಭ್ಯ:
ಮಳೆ ಹಾನಿ ಸಂಬಂಧ ಪರಿಹಾರ ಕೊಡಲು 685 ಕೋಟಿ ರೂ.ಗಳು ಜಿಲಾಡಳಿತಗಳಲ್ಲಿ ಈಗಾಗಲೇ ಲಭ್ಯವಿದೆ. ಹೆಚ್ಚಿನ ಅನುದಾನಕ್ಕೆ ಬೇಡಿಕೆಬಂದರೆ ಕೊಡಲು ರಾಜ್ಯ ಸರಕಾರ ತಯಾರಿದೆ. ಈ ಸಂಬಂಧ ಈಗಾಗಲೇ ಹಣಕಾಸು ಇಲಾಖೆ ಕಾರ್ಯದರ್ಶಿಗಳು ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ದಾವಣಗೆರೆ ಸೇರಿದಂತೆ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪರಿಹಾರ ಆ್ಯಪ್ ನಲ್ಲಿ ಮಾಹಿತಿ ಆಪ್ ಲೋಡ್ ಮಾಡಿದವರಿಗೆ ಪರಿಹಾರವನ್ನು ವಿತರಿಸಲಾಗುತ್ತಿದೆ. ಪರಿಹಾರ ಮೊತ್ತ ಹೆಚ್ಚಳ ಕೇಂದ್ರ ಸರಕಾರದಮಟ್ಟದಲ್ಲೇ ತೀರ್ಮಾನ ಆಗಬೇಕು ಎಂದರು.
ಕೋವಿಡ್ ನಿಯಂತ್ರಣಕ್ಕೆ ಕಟ್ಟೆಚ್ಚರ:
ಕೋವಿಡ್ 19 ಸಾಂಕ್ರಾಮಿಕ ಅಲ್ಲಲ್ಲಿ ಕ್ಲಸ್ಟರ್ ನಲ್ಲಿ ಕಂಡುಬರುತ್ತಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಕಂಟೇನ್ಮೆಂಟ್ ವಲಯಗಳನ್ನು ಮಾಡಿ, ಸಂಪರ್ಕಿತರ ಪರೀಕ್ಷೆ, ಕ್ವಾರಂಟೈನ್ ಮಾಡಲಾಗಿದೆ. ಕೆಲವು ಮಾದರಿಗಳನ್ನು ಡೆಲ್ಟಾವೋ, ಓಮ್ರಿಕಾನೋ ಅಂಥಾ ಖಚಿತಪಡಿಸಲು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಬರುವ ಪ್ರತಿಯೊಬ್ಬರನ್ನು ಪರೀಕ್ಷಿಸಲಾಗುತ್ತಿದ್ದು, ನೆಗೆಟಿವ್ ವರದಿ ಬಂದ ನಂತರವೇ ನಗರ ಪ್ರವೇಶಕ್ಕೆ ಅವಕಾಶ ನೀಡಲು ಸೂಚನೆ ನೀಡಲಾಗಿದೆ. ಕೇರಳದಿಂದ ರಾಜ್ಯಕ್ಕೆ ಪ್ರವೇಶಿಸುವವರ ಮೇಲೆಯೂ ದೊಡ್ಡ ಪ್ರಮಾಣದಲ್ಲಿ ನಿಗಾ ಇರಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಕೇರಳದ ವಿದ್ಯಾರ್ಥಿಗಳು, ನರ್ಸಿಂಗ್ ಸಿಬ್ಬಂದಿ ಇವರುಗಳ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ ಎಂದರು.
ಬೇರೆ ಬೇರೆ ದೇಶದಲ್ಲಿ ಕಂಡುಬಂದಿರುವ ಹೊಸ ರೂಪಾಂತರಿ ತಳಿಯ ಬಗ್ಗೆ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ನಿರ್ದೇಶನಗಳಂತೆ ಕರ್ನಾಟಕದಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಶಾಲಾ ಕಾಲೇಜುಗಳ ಮೇಲೆಯೂ ನಿಗಾ ವಹಿಸಿದ್ದು, ಎಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಅಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್,ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಸ್ಪಿ ರಾಹುಲ್‍ಕುಮಾರ್ ಶಹಾಪುರವಾಡ್, ಮಾಜಿ ಸಚಿವ ಶಿವಣ್ಣ, ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ಸೇರಿ ಹಲವು ಗಣ್ಯರು ಹಾಜರಿದ್ದರು.
ದಾಸೋಹ ದಿನ ಸಿದ್ಧಲಿಂಗಶ್ರೀಗಳ ಜೊತೆ ಚರ್ಚಿಸಿ ಆಚರಣೆ
ನಡೆದಾಡುವ ದೇವರೆಂದೇ ಪ್ರಸಿದ್ಧರಾದ ನಮ್ಮೆಲ್ಲರ ಆರಾಧ್ಯ ದೈವ ಡಾ.ಶಿವಕುಮಾರಸ್ವಾಮೀಜಿ ಅವರ ಗದ್ದುಗೆಗೆ ಬಿಲ್ವಾರ್ಚನೆ ಮಾಡುವ ಮೂಲಕ ಶ್ರೀಗಳ ಆಶೀರ್ವಾದ ಪಡೆದುಕೊಂಡಿರುವೆ. ಅವರು ಮಾಡಿರುವಂತಹ ಸೇವೆಯಿಂದ ಆಧುನಿಕ ಭಾರತದಲ್ಲಿ ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದರು. ಅವರಿದ್ದ ಕಾಲಘಟ್ಟದಲ್ಲಿ ನಾವಿದ್ದೇವೆ ಎನ್ನುವುದೇ ನಮ್ಮ ಪುಣ್ಯ ಭಾಗ್ಯ ಎಂದ ಮುಖ್ಯಮಂತ್ರಿಗಳು ದಾಸೋಹ ದಿನ ಆಚರಣೆ ಸ್ವರೂಪದ ಬಗ್ಗೆ ಹಾಲಿ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಸ್ವಾಮೀಜಿ ಅವರ ಜೊತೆ ಮಾತಾಡ್ತಿನಿ. ಅವರು ಏನು ಆದೇಶ ಕೊಡ್ತಾರೆ ಆಪ್ರಕಾರ ನಾವು ನಡೆಸ್ಕೊಂಡು ಹೋಗ್ತೇವೆ ಎಂದರು.
ಶ್ರೀಗಳ ಗದ್ದುಗೆಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ
ಲಿಂಗೈಕ್ಯ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಗದ್ದುಗೆಗೆ ವೀರಶೈವ ಲಿಂಗಾಯಿತ ಮಹಾವೇದಿಕೆ, ಯುವವೇದಿಕೆಯಿಂದ ಕಾರ್ತಿಕ ಕಡೇ ಸೋಮವಾರದ ಪ್ರಯುಕ್ತ ಲಕ್ಷ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಬಳಿಕ ಹೆಲಿಕ್ಯಾಪ್ಟರ್‍ನಲ್ಲಿ ಗದ್ದುಗೆಗೆ ಪುಷ್ಪ ವೃಷ್ಟಿ ಮಾಡಲಾಯಿತು. ಇದನ್ನು ಕಣ್ತುಂಬಿಕೊಳ್ಳಲು ಮಠದ ವಿದ್ಯಾರ್ಥಿಗಳು ಸೇರಿ ಸಹಸ್ರಾರು ಸಂಖ್ಯೆಯ ಭಕ್ತರು ಸಮಾವೇಶಗೊಂಡಿದ್ದರು. ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್‍ಕಲ್ಲೂರು ಜಿಲ್ಲಾಧ್ಯಕ್ಷ ರವಿ ಚಂಗಾವಿ, ಗೌರವಾಧ್ಯಕ್ಷ ರುದ್ರೇಶ್, ಬಸವರಾಜು ಇತರ ಪದಾಧಿಕಾರಿಗಳು ಹಾಗೂ ಕರುನಾಡ ವಿಜಯಸೇನೆಯ ಎಚ್.ಎನ್.ದೀಪಕ್ ಮತ್ತಿತರರು ಪಾಲ್ಗೊಂಡರು. ನಟ ಡಾರ್ಲಿಂಗ್ ಕೃಷ್ಣ, ನಟಿ ಅದಿತಿ ಪ್ರಭುದೇವ್, ಧರ್ಮಕೀರ್ತಿ ಅತಿಥಿಗಳಾಗಿ ಪಾಲ್ಗೊಂಡರು.
ಸಿದ್ಧಗಂಗೆಯ ಲಿಂಗೈಕ್ಯ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಗದ್ದುಗೆಯ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ನಿ ಸಮೇತ ಪಾಲ್ಗೊಂಡು ಪೂಜೆಸಲ್ಲಿಸಿದರು. ಶ್ರೀ ಸಿದ್ಧಲಿಂಗಸ್ವಾಮೀಜಿ, ಸಚಿವ ಬಿ.ಸಿ.ನಾಗೇಶ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ವೀರಶೈವ ಲಿಂಗಾಯಿತ ಮಹಾವೇದಿಕೆ ಮುಖಂಡರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ