ಬೆಂಗಳೂರು:
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ₹ 25 ಲಕ್ಷ ಬಹುಮಾನ ಘೋಷಿಸಲಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು. ಸತತವಾಗಿ ಒಂದು ವರ್ಷ ಪರಿಶ್ರಮಪಟ್ಟವಿಶೇಷ ತನಿಖಾ ತಂಡ ಆರೋಪಿಗಳನ್ನು ಮುಂಬೈ ಸೇರಿದಂತೆ ವಿವಿಧೆಡೆ ಬಂಧಿಸಿತ್ತು.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಿಂದಾಗಿ ಮಹಾರಾಷ್ಟ್ರದಲ್ಲಿ ನಡೆದಿದ್ದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪಾನ್ಸರೆ ಅವರ ಹತ್ಯೆ ಪ್ರಕರಣದ ಆರೋಪಿಗಳ ಬಗ್ಗೆಯೂ ಸುಳಿವು ಲಭಿಸಿತ್ತು. ವಿಶೇಷ ತನಿಖಾ ತಂಡ ನೀಡಿದ ಸುಳಿವಿನ ಮೇರೆಗೆ ಸಿಬಿಐನವರು ವಿಚಾರವಾದಿಗಳ ಕೊಲೆ ಹಂತಕರನ್ನು ಬಂಧಿಸಿದ್ದರು.
ನಗರದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ಕೆ. ಸಿಂಗ್ ನೇತೃತ್ವದಲ್ಲಿ ರಚಿಸಲಾಗಿದ್ದ ತಂಡದಲ್ಲಿ ಕಾನ್‌ಸ್ಟೆಬಲ್‌ನಿಂದ ಐಪಿಎಸ್‌ವರೆಗಿನ ಅಧಿಕಾರಿಗಳು ಇದ್ದರು. ಅವರವರ ಕೆಲಸಕ್ಕೆ ತಕ್ಕಂತೆ ಬಹುಮಾನವನ್ನು ಹಂಚಿಕೆ ಮಾಡಲಾಗಿದೆ.
ಈ ಕುರಿತು ಗೃಹ ಇಲಾಖೆ ಆದೇಶ ಹೊರಡಿಸಿದ್ದು, ‘ಜಗತ್ತಿನಾದ್ಯಂತ ತೀವ್ರ ಸಂಚಲನ ಉಂಟುಮಾಡಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಎಸ್‌ಐಟಿ ತಂಡದ ಸದಸ್ಯರು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಚಾಣಾಕ್ಷತನ ಹಾಗೂ ನಿಷ್ಠೆಯಿಂದ ಭೇದಿಸಿದ್ದಾರೆ. ತಂಡದದಲ್ಲಿದ್ದ 91 ಮಂದಿಗೆ ₹ 25 ಲಕ್ಷ ಬಹುಮಾನ ಘೋಷಿಸಲಾಗಿದೆ’ ಎಂದು ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
