ಪಾಟ್ನ:
ಬಿಹಾರ ಸರ್ಕಾರ ಇತ್ತೀಚಿಗೆ ನಡೆಸಿದ ಜಾತಿ ಸಮೀಕ್ಷೆಯ ಆಧಾರದ ಮೇಲೆ ರಾಜ್ಯ ಸರ್ಕಾರಿ ಉದ್ಯೋಗದಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗ(ಒಬಿಸಿ), ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ(ಎಸ್ಟಿ) ಮೀಸಲಾತಿಯನ್ನು ಹೆಚ್ಚಿಸುವ ಮಹತ್ವದ ಪ್ರಸ್ತಾಪವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಮಾಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳ ಸಂಬಂಧ ಮಸೂದೆ ಮಂಡಿಸಲಾಗುವುದು ಎಂದು ಬಿಹಾರ ಸಿಎಂ ತಿಳಿಸಿದ್ದಾರೆ.
“ಎಸ್ಸಿ ಮತ್ತು ಎಸ್ಟಿ ಸೇರಿ ಪ್ರಸ್ತುತ ಶೇ.17 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅದನ್ನು ಶೇಕಡಾ 22 ಕ್ಕೆ ಹೆಚ್ಚಿಸಬೇಕು. ಅದೇ ರೀತಿ ಒಬಿಸಿ ಮೀಸಲಾತಿ ಪ್ರಸ್ತುತ ಶೇಕಡಾ 50 ರಿಂದ ಶೇಕಡಾ 65 ಕ್ಕೆ ಏರಿಸಬೇಕು” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
OBCಗಳು ಹಾಗೂ ಅತ್ಯಂತ ಹಿಂದುಳಿದ ವರ್ಗಗಳ(EBC) ಮೀಸಲಾತಿಯನ್ನು ಶೇ. 50 ರಿಂದ ಶೇ. 65ಕ್ಕೆ ಹೆಚ್ಚಿಸುವುದು ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿದೆ. ಅಕ್ಟೋಬರ್ 2, 2023 ರಂದು ಬಿಡುಗಡೆಯಾದ ರಾಜ್ಯ ಸರ್ಕಾರದ ಜಾತಿ ಆಧಾರಿತ ಸಮೀಕ್ಷೆಯ ಪ್ರಕಾರ, ಒಬಿಸಿಗಳು ಮತ್ತು ಇಬಿಸಿಗಳು ಒಟ್ಟಾರೆಯಾಗಿ ಬಿಹಾರದ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಇದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ