ಬೆಂಗಳೂರು:
ಗುಣ ನಡತೆ, ಗೌರವ ಅಥವಾ ಭಾವನೆ ಮನುಷ್ಯನ ಜೀವನದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಮಾನವಾಗಿ ಅನ್ವಯವಾಗುತ್ತದೆ ಎಂದು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹೇಳಿದ್ದು, ಮಹಿಳೆ ಸೇರಿದಂತೆ ಮೂವರು ಯುವಕರ ನಿರೀಕ್ಷಣಾ ಜಾಮೀನು ತಿರಸ್ಕರಿಸಿದೆ.
ಈ ಮೂವರು ಆರೋಪಿಗಳು ವ್ಯಕ್ತಿಯೊಬ್ಬನನ್ನು ಬೆತ್ತಲೆಯಾಗಿ ವೀಡಿಯೊ ಮಾಡಿ ಅದನ್ನು ಹಂಚುವುದಾಗಿ ಮತ್ತು ಮಾಧ್ಯಮಗಳಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು.
52ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಮಮತಾಜ್, ಗಂಡು ಅಥವಾ ಹೆಣ್ಣಿನ ದೇಹವನ್ನು ಯಾವಾಗಲೂ ಪವಿತ್ರವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ದೈಹಿಕ ಗಾಯಗಳಿಗಿಂತ ಮಾನಸಿಕ ಗಾಯಗಳು ಹೆಚ್ಚು ಘೋರವಾಗಿರುತ್ತವೆ. ಬೆತ್ತಲೆ ವೀಡಿಯೊವನ್ನು ಸಾರ್ವಜನಿಕಗೊಳಿಸುವ ಕ್ರಿಯೆಯು ಅಳಿಸಲಾಗದ ಗಾಯವನ್ನು ಮನಸ್ಸಿಗೆ ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಏಪ್ರಿಲ್ 21 ರಂದು ಆರೋಪಿ ಮಹಿಳೆ ತನ್ನ ಸ್ನೇಹಿತ ದೂರುದಾರ ಲಗ್ಗೆರೆ ನಿವಾಸಿಗೆ ಜೆ.ಪಿ.ನಗರದ ಪಬ್‌ಗೆ ಬರುವಂತೆ ಕರೆ ಮಾಡಿದ್ದಳು. ರಾತ್ರಿ 11 ಗಂಟೆ ಸುಮಾರಿಗೆ ಆತ ಬಂದಿದ್ದನು. ಈಕೆ ತನ್ನ ಇಬ್ಬರು ಪುರುಷ ಸ್ನೇಹಿತರ ಜೊತೆಗೆ ರಾತ್ರಿ 2 ಗಂಟೆಯವರೆಗೆ ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ್ದಾರೆ.
ಬಳಿಕ ಆರೋಪಿಯೊಬ್ಬ ದೂರುದಾರರ ಸ್ಕೂಟರ್ ಕೀ ಕಸಿದುಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಮತ್ತು ಮಹಿಳೆ ದೂರುದಾರರನ್ನು ಕಾರಿನೊಳಗೆ ತಳ್ಳಿ, ಮಹಿಳೆಯಿಂದ ಪಡೆದ ಹಣವನ್ನು ಹಿಂದಿರುಗಿಸದ ಕಾರಣ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ.
ನಂತರ ದೂರುದಾರನನ್ನು ಕೆಂಗೇರಿಯ ಶಿರ್ಕೆ ಅಪಾರ್ಟ್‌ಮೆಂಟ್ ಬಳಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಮೈಸೂರು ರಸ್ತೆ ಬಳಿ ಆ ದಿನ 70 ಸಾವಿರ ಅಥವಾ ಮರುದಿನ 1 ಲಕ್ಷ ಕೊಡುವಂತೆ ಕೇಳಿದ್ದಾರೆ. ಬಳಿಕ ಆರೋಪಿಯೊಬ್ಬ ತಂಗಿದ್ದ ಸೊನ್ನೇನಹಳ್ಳಿಗೆ ಕರೆದೊಯ್ದು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದರು. ಅವನ ಬಟ್ಟೆಯನ್ನೆಲ್ಲ ತೆಗೆಯುವಂತೆ ಮಾಡಿ ವಿಡಿಯೋ ಮಾಡಿದ್ದರು.
ನಂತರ ಡೆಲಿವರಿ ಅಪ್ಲಿಕೇಶನ್ ಮೂಲಕ ಅವರ ನಿವಾಸದಿಂದ ಚೆಕ್ ಪುಸ್ತಕ ಪಡೆಯುವಂತೆ ಒತ್ತಾಯಿಸಿದರು. ಖಾಲಿ ಚೆಕ್‌ಗೆ ಸಹಿ ಹಾಕಿಸಿದರು. ಮೇ 5 ರೊಳಗೆ ಹಣ ಹಿಂತಿರುಗಿಸದಿದ್ದರೆ, ವೀಡಿಯೊವನ್ನು ಅವರ ಎಲ್ಲಾ ಸಂಪರ್ಕಗಳಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದರು. ಮನೆಗೆ ಮರಳಿದ ಒಂದು ದಿನದ ನಂತರ ದೂರುದಾರರು ಏಪ್ರಿಲ್ 23 ರಂದು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗೆ ಜಾಮೀನು ನೀಡಿದರೆ ಅವರು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಬಹುದು ಎಂದು ನ್ಯಾಯಾಲಯ ಹೇಳಿದೆ.