ಕಂದಾಯ ಸಚಿವರು ಕಾಲಜ್ಞಾನಿ, ಸಂಖ್ಯಾಜ್ಞಾನಿ : ಕುಟುಕಿದ ಮಾಜಿ ಸಿಎಂ

ಬೆಂಗಳೂರು :

    ಜೆಡಿಎಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಇಪ್ಪತ್ತು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲುತ್ತದೆ ಎಂದು ಹೇಳಿಕೆ ನೀಡಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ಸಾಮ್ರಾಟ್ ಅಶೋಕೂ, ನಿಮ್ಮ ಪಕ್ಷದಲ್ಲಿರುವ ಅರುಣರಾಗ, ವಿಜಯನಾದ ಕಥನಗಳ ಕಥೆ ಏನು ಎಂದು ಪ್ರಶ್ನಿಸಿದ್ದಾರೆ.

     ಸನ್ಮಾಶ್ರೀ ಅಶೋಕ್ ಅವರು ಭವಿಷ್ಯವನ್ನು, ಸಂಖ್ಯಾಶಾಸ್ತçವನ್ನು ಹೇಳುತ್ತಾರೆ ಎಂದು ನನಗೆ ಗೊತ್ತಾಗಿದ್ದು ಈಗಲೇ. ಅವರಲ್ಲೂ ಒಬ್ಬರು ‘ಕಾಲಜ್ಞಾನಿ’, ‘ಸಂಖ್ಯಾಜ್ಞಾನಿ’ ಇದ್ದಾರೆನ್ನುವ ಸೋಜಿಗ ನನಗೆ ಬೆಕ್ಕಸ ಬೆರಗುಂಟು ಮಾಡಿದೆ. ಚುನಾವಣೆ ನಂತರ ತಮ್ಮ ದುಡಿಮೆಗೆ ದೋಖಾ ಇಲ್ಲ ಎನ್ನುವ ಆತ್ಮವಿಶ್ವಾಸ ಅಶೋಕ್ ಅವರಲ್ಲಿದೆ, ಸಂತೋಷ. ನಮ್ಮ ಜೆಡಿಎಸ್ ಪಕ್ಷಕ್ಕೆ 20 ಸ್ಥಾನಗಳು ಬರುತ್ತವೆ ಎಂದು ಚಿಕ್ಕಬಳ್ಳಾಪುರದಲ್ಲಿ ಗಿಣಿ ಭವಿಷ್ಯ ಹೇಳಿರುವ ಅವರು, ತಮ್ಮ ಬಿಜೆಪಿ ಅದೆಷ್ಟು ಸೀಟು ಗೆಲ್ಲುತ್ತದೆ ಎನ್ನುವುದನ್ನು ಹೇಳಲು ಮರೆತಿದ್ದಾರೆ! ಮರೆತಿದ್ದಾರೆಯೋ ಅಥವಾ ಬೇಕೆಂದೇ ಹೇಳಲಿಲ್ಲವೋ.. ಅವರೇ ಹೇಳಬೇಕು. ಎಷ್ಟೇ ಆಗಲಿ, ಅವರ ಜಾಣತನ ಜಗಜ್ಜಾಹೀರು ಎಂದು ಅಶೋಕ್ ಅವರಿಗೆ ಟಾಂಗ್ ನೀಡಿದ್ದಾರೆ.

    ಅಶೋಕ್ ಸಾಹೇಬರು ‘ವಿಜಯ ಸಂಕಲ್ಪ’ಕ್ಕೆ ಬದಲಾಗಿ ‘ಸುಳ್ಳುಸಂಕಲ್ಪ’ ಮಾಡಿಕೊಂಡೇ ರಾಜ್ಯವನ್ನು ಸುತ್ತುತ್ತಿದ್ದಾರೆ. ಅವರ ‘ಸುಳ್ಳುಸಂಕಲ್ಪ ಯಾತ್ರೆ’ಗೆ ನನ್ನ ಶುಭಾಶಯಗಳು ಹಾಗೂ ಗಾಢ ಸಾಂತ್ವನಗಳು. ಆದರೆ, ಅವರ ಕಾಮಾಲೆ ಮನಸ್ಸಿನ, ಅವರ ಅರೆಬೆಂದ ಲೆಕ್ಕದ ಬಗ್ಗೆ ನನ್ನ ಅನುಕಂಪವಿದೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಕಂಡವರ ತಟ್ಟೆಯಲ್ಲಿ ನೊಣ ಹುಡುಕುವುದು ಬಿಜೆಪಿಗೆ ಅಂಟಿದ ಜಾಡ್ಯ ಮತ್ತು ಆಜನ್ಮಪರ್ಯಂತ ಬಂದಿರುವ ಚಾಳಿ. ನಮ್ಮ ಪಕ್ಷ ಬಿಡೋರ ಮಾತು ಹಾಗಿರಲಿ, ನಿಮ್ಮ ಪಕ್ಷದಲ್ಲಿ ವಾರದೊಪ್ಪತ್ತಿನಿಂದ ನಿರಂತರವಾಗಿ ಕೇಳಿಬರುತ್ತಿರುವ ಅರುಣರಾಗ, ವಿಜಯನಾದ ಕಥನಗಳ ಕಥೆ ಎನು ಅಶೋಕ್ ಅವರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

     ಬುಧವಾರ ನಿಮ್ಮ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿದ ಪಂಚಾಯಿತಿ ಕಟ್ಟೆ ಪುರಾಣದ ಅಸಲಿಯೆತ್ತೇನು? ಈ ಬಿಜೆಪಿಯ ಗೃಹಭಂಗದಿAದ ಯಾರಿಗೆ ದುಃಖ? ಯಾರಿಗೆ ಸಂತೋಷ? ಕೊಂಚ ಹೇಳಬಲ್ಲಿರಾ ಅಶೋಕ್ ಅವರೆ. ಇಷ್ಟೆಲ್ಲಾ ಅವಾಂತರ, ಹಗರಣಗಳ ಹೊಲಸು ಮೆತ್ತಿಕೊಂಡಿರುವ ನೀವು, ನಮ್ಮನ್ನು 20 ಸೀಟಿಗೇ ಕಟ್ಟಿ ಹಾಕಬಲ್ಲಿರಾ? 40% ನಾಯಕರಾದ ನಿಮ್ಮಲ್ಲಿ ಆ ಧಮ್ಮು ತಾಕತ್ತು ಇದೆಯಾ? ಹಾಗಿದ್ದರೆ, ವಿಶ್ವವಂದ್ಯ ಪ್ರಧಾನಿಗಳು ಅಷ್ಟು ಬಿಡುವಾಗಿ ಕರ್ನಾಟಕಕ್ಕೆ ಪದೇಪದೆ ಓಡೋಡಿ ಬರುತ್ತಾರೇಕೆ? ಅಮಿತ್ ಶಾರವರ ಅಪರಿಮಿತ ಭೇಟಿಗಳು ಯಾಕೋ? ಪಾಪ.. ನಿಮ್ಮ ಫಜೀತಿ.. ಎಂದು ಕಂದಾಯ ಸಚಿವರನ್ನು ಮಾಜಿ ಮುಖ್ಯಮಂತ್ರಿಗಳು ಲೇವಡಿ ಮಾಡಿದ್ದಾರೆ.

    ಚುನಾವಣೆ ಆಗಲಿ, ಫಲಿತಾಂಶ ಬರಲಿ. ಓಡು ಮಗಾ, ಓಡು ಮಗಾ ಸರದಿ ಯಾರದ್ದೆನ್ನುವುದು ಗೊತ್ತಾಗುತ್ತದೆ. ಎಷ್ಟಾದರೂ ಓಡು ಮಗಾ ರೇಸ್‌ನಲ್ಲಿ ನಿಮ್ಮನ್ನು ಸರಿಗಟ್ಟುವ ವೀರರೂ ಶೂರರೂ ಕರ್ನಾಟಕದಲ್ಲಿ ಇದ್ದಾರೆಯೆ? ಆಪರೇಷನ್ ಕಮಲಕಾಂಡದಲ್ಲಿ ನಿಮ್ಮದೂ ಒಂದು ತುಕ್ಕು ಹಿಡಿದ ಅಧ್ಯಾಯವಿದೆಯಲ್ಲ ಸಾಮ್ರಾಟ್ ಅಶೋಕೂ ಮತ್ತು ಆಪರೇಷನ್ ಕಮಲವೂ.. ಎಂದು ಕಂದಾಯ ಸಚಿವರ ಕಾಲೆಳೆದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap