ಮುಂಬಯಿ:
ಟೀಮ್ ಇಂಡಿಯಾದ ಕ್ರಿಕೆಟಿಗ ರಿಷಭ್ ಪಂತ್ ಅವರು ಇತ್ತೀಚೆಗೆ ಶತಕ ಬಾರಿಸಿದ ಬಳಿಕ ಮೈದಾನದಲ್ಲಿ ಪಲ್ಟಿ ಹೊಡೆದು ಸಂಭ್ರಮಾಚರಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಪಂತ್‌ಗೆ ಚಿಕಿತ್ಸೆ ನೀಡಿರುವ ಪ್ರಸಿದ್ಧ ಮೂಳೆ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪರ್ದಿವಾಲಾ ಕಳವಳ ವ್ಯಕ್ತಪಡಿಸಿದ್ದು ಇದು ಅನಗತ್ಯ ಸಂಭ್ರಮಾಚರಣೆ ಎಂದಿದ್ದಾರೆ.
2022 ರಲ್ಲಿ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ರಿಷಭ್ ಪಂತ್ ಚಲಾಯಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಪಂತ್ ಗಂಭೀರ ಗಾಯದೊಂದಿಗೆ ಪವಾಡಸದೃಶವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದರು. ಪಂತ್ ಅವರ ತಲೆ, ಬೆನ್ನು, ಕಾಲಿಗೆ ಗಾಯಗಳಾಗಿದ್ದವು. ಬಲಿಗಾಲಿನ ಮಂಡಿಯ ಲಿಗಮೆಂಟ್ (ಅಸ್ಥಿರಜ್ಜು)ಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಈ ವೇಳೆ ಪರ್ದಿವಾಲಾ ಅವರು ಪಂತ್‌ಗೆ ಮೂಳೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೊಂಡ ಕಾಲಿಗೆ ಗಾಯಗೊಂಡರೆ ಅಪಾಯ ಎಂಬ ಎಚ್ಚರಿಕೆ ಕೂಡ ನೀಡಿದ್ದರು.
ಆದರೆ ಪಂತ್ ಇದೀಗ ಪದೇಪದೆ ಶತಕ ಬಾರಿಸಿದ ಬಳಿಕ ಪಲ್ಟಿ ಹೊಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಪರ್ದಿವಾಲಾ ಅವರು ಪಂತ್‌ಗೆ ಎಚ್ಚರಿಕೆ ನೀಡಿದಾರೆ. ದಿ ಟೆಲಿಗ್ರಾಫ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುವ ವೇಳೆ ‘ಪಂತ್ ಪಲ್ಟಿ ಹೊಡೆಯುವುಉ ಅನಗತ್ಯ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಪಲ್ಟಿ ಹೊಡೆಯುವ ವೇಳೆ ಕಾಲಿನ ಮೇಲೆ ಒತ್ತಡ ಬೇಳುತ್ತದೆ. ಜತೆಗೆ ಕಾಲು ಉಳುಕುವ ಸಾಧ್ಯತೆ ಕೂಡ ಇದೆ. ಹೀಗಾಗಿ ಅವರು ಎಚ್ಚರಿಕೆಯಿಂದ ಇರುವುದು ಉತ್ತಮ ಎಂದು ಸಲಹೆ ನೀಡಿದಾರೆ. “ರಿಷಭ್ ಜಿಮ್ನಾಸ್ಟ್ ಆಗಿ ತರಬೇತಿ ಪಡೆದಿದ್ದಾರೆ. ಆದ್ದರಿಂದ ಅವರು ಇತ್ತೀಚೆಗೆ ಪಲ್ಟಿಗಳನ್ನು ಹೊಡೆಯುತ್ತಿದ್ದಾರೆ. ಆದರೂ ಅನಗತ್ಯ!” ಎಂದು ಡಾ. ಪರ್ದಿವಾಲಾ ಹೇಳಿದರು.
ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಪಂತ್ ಸದ್ಯ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಈ ವರೆಗೆ ಆಡಿರುವ 19 ಇನಿಂಗ್ಸ್‌ಗಳಿಂದ 45.52ರ ಸರಾಸರಿಯಲ್ಲಿ 808 ರನ್ ಗಳಿಸಿದ್ದು, ಇದರಲ್ಲಿ 4 ಶತಕ ಹಾಗೂ 2 ಅರ್ಧಶತಕಗಳಿದ್ದು, 1,000 ರನ್‌ಗಳಿಸುವ ಹೊಸ್ತಿಲಲ್ಲಿ ನಿಂತಿದ್ದಾರೆ. ಇಂಗ್ಲೆಂಡ್ ಸರಣಿ ಮುಕ್ತಾಯದ ವೇಳೆಗೆ ಅವರು ಈ ಮೈಲುಗಲ್ಲು ತಲುಪುವ ಸಾಧ್ಯತೆ ಇದೆ.








