ಭಾರಿ ಮಳೆಗೆ ತತ್ತರಿಸಿದ ಬೆಂಗಳೂರು: ಹಲವು ರಸ್ತೆ ಜಲಾವೃತ

ಬೆಂಗಳೂರು

   ಸೈಕ್ಲೋನ್‌ ಪರಿಣಾಮ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಇಡೀ ನಗರವೇ ಕಂಗಾಲಾಗಿತ್ತು. ಭಾನುವಾರದಿಂದಲೂ ರಚ್ಚೆ ಹಿಡಿದಿದ್ದ ಮಳೆ, ಸೋಮವಾರ ರೌದ್ರರೂಪ ತಾಳಿತು. ಮುಂಜಾನೆಯಿಂದ ಸಂಜೆವರೆಗೂ ಒಂದೇ ಸಮನೆ ಸುರಿಯಿತು. ವರುಣಾರ್ಭಟಕ್ಕೆ ಮಹಾನಗರದ ಗಲ್ಲಿ ಗಲ್ಲಿಯಲ್ಲಿಯೂ ನೀರು ತುಂಬುವಂತಾಯಿತು.

   ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಬೆಂಗಳೂರಿಗೆ ದೊಡ್ಡ ಮಳೆಯನ್ನೇ ಹೊತ್ತುತಂದಿದೆ. ಭಾನುವಾರ ಸಂಜೆಯಿಂದಲೂ ಶುರುವಾಗಿದ್ದ ಮಳೆ ಸೋಮವಾರ ಸಂಜೆವರೆಗೂ ಒಂದೇ ಸಮನೇ ಧಾರಾಕಾರವಾಗಿ ಸುರಿದಿದೆ. ಆಗೋಮ್ಮೆ ಈಗೊಮ್ಮೆ ಬಿಡುವು ಕೊಟ್ಟರೂ ಬರೋಬ್ಬರಿ 59.8 ಮಿ.ಮೀ ಮಳೆಯಾಗಿದೆ. ಅದರಲ್ಲೂ ಎಚ್​ಎಎಲ್ ವಿಮಾನ ನಿಲ್ದಾಣದಲ್ಲಿ 80.01 ಮಿ.ಮೀ ಮಳೆ ದಾಖಲಾಗಿದೆ. ಈ ವರುಣಾರ್ಭಟ ಬೆಂಗಳೂರಿನಲ್ಲಿ ಸೃಷ್ಟಿಸಿರೋ ಅವಾಂತರಗಳು ಒಂದೆರಡಲ್ಲ.

   ಬೆಂಗಳೂರು ನಗರದ ಗೊರಗುಂಟೆಪಾಳ್ಯ ಬಳಿಯ ರಾಜಕುಮಾರ್ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಟೆಂಪೊ, ಕಾರು ಜಖಂ ಆಗಿದ್ದವು. ಮರ ಬಿದ್ದಿದ್ದರಿಂದ ಟ್ರಾಫಿಕ್‌ಜಾಮ್‌ ಉಂಟಾಗಿ ಸವಾರರು ಪರದಾಡಿದರು.ಬೆಂಗಳೂರು ನಗರದ ಹೆಚ್​ಎಂಟಿ ಲೇಔಟ್, ವಿದ್ಯಾರಣ್ಯಪುರದಲ್ಲಿ ಮರಗಳು ನೆಲಕ್ಕುರುಳಿದವು. ಇದರಿಂದ ಕೆಲಕಾಲ ಸವಾರರು ಪರದಾಡುವಂತಾಯಿತು. ಬಳಿಕ ಬಿಬಿಎಂಪಿ ಸಿಬ್ಬಂದಿ ನೆಲಕ್ಕುರುಳಿದ್ದ ಮರ ತೆರವು ಮಾಡಿದರು.

   ಮಾನ್ಯತಾ ಟೆಕ್‌ಪಾರ್ಕ್‌ ಬಳಿ ರಸ್ತೆ ಬದಿಯೇ ಬೃಹತ್‌ ಕಟ್ಟಡ ಕಾಮಗಾರಿ ನಡೆಯುತ್ತಿದೆ. 30 ಅಡಿಯಷ್ಟು ನೆಲ ಅಗೆಯಲಾಗಿದ್ದು, ರಸ್ತೆ ಪಕ್ಕದಲ್ಲೇ ಕ್ಷಣಕ್ಷಣ ಭೂಮಿ ಕುಸಿಯುತ್ತಿದೆ. ನೋಡ ನೋಡುತ್ತಿದ್ದಂತೆಯೇ ಕಾಂಪೌಂಡ್‌ ಕೂಡಾ ಕುಸಿದು ಬಿದ್ದಿದ್ದು, ಸವಾರರು ಜೀವಭಯದಲ್ಲೇ ಸಂಚರಿಸುತ್ತಿದ್ದರು.

   ಬೆಳ್ಳಂದೂರು ಕೆರೆ ರಸ್ತೆ ಕೂಡಾ ಈಗ ಕೆರೆಯಂತೆಯೇ ಆಗಿದೆ. ರಸ್ತೆ ಮೇಲೆ 2 ಅಡಿಯಷ್ಟು ನೀರು ನಿಂತಿದ್ದು ಸವಾರರು ಅದರಲ್ಲೇ ಸರ್ಕಸ್‌ ಮಾಡುತ್ತಾ ಸಾಗಿದರು. ವಿಶ್ವದ ದೈತ್ಯ ಐಟಿ ಕಂಪನಿಗಳು ವಾಸ್ತವ್ಯ ಹೂಡಿರುವ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ರಸ್ತೆಯೇ ಕಾಣದಾಯಿತು. ಮಂಡಿ ಮಟ್ಟಕ್ಕೆ ತುಂಬಿದ್ದ ನೀರಿನಲ್ಲೇ ಬೈಕ್‌ ಸವಾರರು ಸಂಚಾರ ಮಾಡಿದರು.

   ಹೆಣ್ಣೂರು ಬಾಗಲೂರು ಮುಖ್ಯ ರಸ್ತೆ ಹಾಗೂ ವಡ್ಡರಪಾಳ್ಯ ಸಾಯಿ ಬಡಾವಣೆಯ ರಸ್ತೆ ಸಂಪೂರ್ಣ ಜಲಾವೃತ ಆಗಿದ್ದು, ಪಾಲಿಕೆ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.ಆರ್‌.ಆರ್‌.ನಗರದ ಕೆರೆಗೋಡಿ ರಸ್ತೆ, ಸರ್ಜಾಪುರ ರಸ್ತೆ, ಏರ್‌ಪೋರ್ಟ್‌ ರಸ್ತೆಯಲ್ಲಿ ಗುಂಡಿಗಳಿಂದ ಸವಾರರು ಹೈರಾಣಾದರು. ಮಳೆ ಸಮಸ್ಯೆ ನಿರ್ವಹಣೆಗೆ ಬಿಬಿಎಂಪಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಈ ಕಂಟ್ರೋಲ್ ರೂಂಗೆ ತಡರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದರು. ಅಧಿಕಾರಿಗಳಿಂದ ಮಳೆ ಹಾನಿ ಕುರಿತು ಮಾಹಿತಿ ಪಡೆದು, ಜನರ ಸಮಸ್ಯೆ ಆಲಿಸಿದರು.

   ಅತ್ತ ಕೇಂದ್ರ ಸಚಿವ ಕುಮಾರಸ್ವಾಮಿ ಟ್ವೀಟ್ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಹಾರಿಹಾಯ್ದಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್‌ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ ಅಂತಾ ಟ್ವೀಟ್​​​ನಲ್ಲೇ ಕಿಡಿಕಾರಿದ್ದಾರೆ. 

   ಬೆಂಗಳೂರಿನಲ್ಲಿ ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್​ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ. 

   ಮಳೆ ಆರ್ಭಟದಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಮಾತ್ರ ರಜೆ ನೀಡಲಾಗಿದೆ. 

   ಬೆಂಗಳೂರಿನಲ್ಲಿ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಇಂದು ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂಗೆ ಅನುಮತಿ ನೀಡಲಾಗಿದೆ ಎಂದು ಇನೋವೇಷನ್ & ಟೆಕ್ನಾಲಜಿ ಸೊಸೈಟಿ ಸುತ್ತೋಲೆ ಹೊರಡಿಸಿದೆ.

Recent Articles

spot_img

Related Stories

Share via
Copy link