ನವದೆಹಲಿ :
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯಕ್ಕಂತು ನಿವೃತ್ತಿಯಾಗುತ್ತಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಇದುವೇ ಈಗ ಬಿಸಿಸಿಐ ಆಯ್ಕೆ ಸಮಿತಿಯ ಚಿಂತೆ ಹೆಚ್ಚಿಸಿದೆ. ಏಕೆಂದರೆ 37 ವರ್ಷದ ಹಿಟ್ಮ್ಯಾನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ನಿವೃತ್ತಿ ಘೋಷಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಈ ನಿರೀಕ್ಷೆಯನ್ನು ರೋಹಿತ್ ಶರ್ಮಾ ಹುಸಿಗೊಳಿಸಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಇತ್ತ ವೈಟ್ ಬಾಲ್ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದರೂ, ರೆಡ್ ಬಾಲ್ ಕ್ರಿಕೆಟ್ನಲ್ಲಿ ಅವರ ಪ್ರದರ್ಶನ ಅಷ್ಟಕಷ್ಟೇ. ಇದಕ್ಕೆ ಸಾಕ್ಷಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅವರು ಕಲೆಹಾಕಿರುವ ಒಟ್ಟು ರನ್ಗಳು.
ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ರೋಹಿತ್ ಶರ್ಮಾ 5 ಇನಿಂಗ್ಸ್ಗಳಲ್ಲಿ ಕಲೆಹಾಕಿದ್ದು ಕೇವಲ 31 ರನ್ಗಳು. ಅಂದರೆ ಟೀಮ್ ಇಂಡಿಯಾ ನಾಯಕ ಕೇವಲ 6.20 ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದರು. ಹೀಗಾಗಿ ಹಿಟ್ಮ್ಯಾನ್ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಲಿದ್ದಾರೆ ಎನ್ನಲಾಗಿತ್ತು. ಆದರೀಗ ಸದ್ಯಕ್ಕಂತು ನಿವೃತ್ತಿ ನೀಡಲ್ಲ ಎನ್ನುವ ಮೂಲಕ ರೋಹಿತ್ ಶರ್ಮಾ ಅಚ್ಚರಿ ಮೂಡಿಸಿದ್ದಾರೆ.
