ಬಾಗಲಕೋಟೆ:
ಸಹಪಾಠಿಗಳ ಮಾನಸಿಕ ಕಿರುಕುಳದಿಂದ ಬೇಸತ್ತ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ 21 ವರ್ಷದ ಕಾಲೇಜು ವಿದ್ಯಾರ್ಥಿನಿ ಅಂಜಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಸಾವಿಗೆ ಕಾರಣರಾದ ಮೂವರ ಹೆಸರನ್ನು ಅವರು ಬರೆದಿಟ್ಟಿರುವ ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಗುಳೇದಗುಡ್ಡದ ನಿವಾಸಿಯಾಗಿರುವ ಅಂಜಲಿ, ಬಿಎ ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗುಳೇದಗುಡ್ಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪೊಲೀಸರಿಗೆ ಲಭ್ಯವಾಗಿರುವ ಡೆತ್ ನೋಟ್‌ನಲ್ಲಿ ಅಂಜಲಿ, ‘ನನ್ನ ಸಾವಿಗೆ ಕಾರಣವಾದ ಈ ಮೂವರು ವ್ಯಕ್ತಿಗಳು ನನ್ನ ಬದುಕಿನಲ್ಲಿ ಪರಿಣಾಮವನ್ನು ಬೀರಿದ್ದಾರೆ. ಅವರುಗಳೆಂದರೆ ವರ್ಷಾ, ಪ್ರದೀಪ್ ಮತ್ತು ಇನ್ನಿತರ ಸ್ನೇಹಿತರು. ನನ್ನ ಬಗ್ಗೆ, ನನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದಾರೆ ಮತ್ತು ಅವರು ನನ್ನ ಬದುಕಿನ ಮಾರಕ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಸುಮ್ಮನೆ ಬಿಡಬಾರದು. ಸೇಯಿಂಗ್ ಗುಡ್ ಬೈ’ ಎಂದು ಅಂಜಲಿ ತಮ್ಮ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಈ ಘಟನೆಯ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆತ್ ನೋಟ್‌ನಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

 


