ಬೆಂಗಳೂರು:
ಬಿಜೆಪಿ– ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಪ್ರತಿಯಾಗಿ ಪಾದಯಾತ್ರೆ ನಡೆಸದೆ, ಸಮಾವೇಶ ಮೂಲಕ ಜನರಿಗೆ ಸತ್ಯ ತಿಳಿಸುತ್ತೇವೆಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಪಾದಯಾತ್ರೆಗೆ ಅನುಮತಿ ನೀಡುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಅಷ್ಟೇ ಅಲ್ಲ, ಪಾದಯಾತ್ರೆಯಿಂದ ಜನರಿಗೆ ತೊಂದರೆಯಾದರೆ ಸುಮ್ಮನಿರುವುದಿಲ್ಲ. ಕಾನೂನುಬಾಹಿರ ಕೆಲಸ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದೂ ಎಚ್ಚರಿಕೆ ನೀಡಿದರು.
ಇದೇ ವೇಳೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆರಂಭಕ್ಕೂ ಮುನ್ನ ಸಾರ್ವಜನಿಕ ಸಭೆ ನಡೆಸಿ ಎಲ್ಲ ಸಂಗತಿಗಳನ್ನು ಜನರಿಗೆ ವಿವರಿಸುವುದಾಗಿಯೂ ಸಚಿವರು ತಿಳಿಸಿದರು.ಬಿಜೆಪಿ-ಜೆಡಿಎಸ್ ಸುಳ್ಳುಗಳನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಮಂಡ್ಯ, ಮೈಸೂರು ಅಥವಾ ಇತರೆಡೆ ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಕಾಂಗ್ರೆಸ್ ಇದನ್ನು ಎದುರಿಸಲಿದೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ನಂತೆ ನಾವು ಪಾದಯಾತ್ರೆ ಮಾಡುವುದಿಲ್ಲ, ಸಭೆ ನಡೆಸಿ ಜನರಿಗೆ ವಾಸ್ತವಾಂಶ ವಿವರಿಸುತ್ತೇವೆ, ಈ ಸಮಾವೇಶಕ್ಕೆ ನಮ್ಮ ರಾಜ್ಯಾಧ್ಯಕ್ಷರು ಯೋಜನೆ ರೂಪಿಸುತ್ತಾರೆ ಎಂದು ತಿಳಿಸಿದರು.ಬಳಿಕ ಪಾದಯಾತ್ರೆ ನಿಲ್ಲಿಸಿದರೆ ರಾಜ್ಯ ಸರ್ಕಾರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರ ಅಷ್ಟು ದುರ್ಬಲವಾಗಿಲ್ಲ. ಪಾದಯಾತ್ರೆಗೆ ಸರ್ಕಾರ ಅನುಮತಿ ನೀಡುವುದಿಲ್ಲ, ಪಾದಯಾತ್ರೆಯನ್ನೂ ನಾವು ತಡೆಯುವುದಿಲ್ಲ. ಪ್ರತಿಭಟನೆ ಮಾಡುವುದು ಅವರ ಹಕ್ಕು, ಆದರೆ, ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ನಾವು ಅವರಿಗೆ ಬೆದರಿಕೆ ಹಾಕುವ ಅಥವಾ ಅವರು ನಮಗೆ ಬೆದರಿಕೆ ಹಾಕುವ ಅಗತ್ಯವಿಲ್ಲ, ನಾವು ಹಿಂದೆ ಮಾಡಿದಂತೆ ಅವರು ಪಾದಯಾತ್ರೆ ನಡೆಸುತ್ತಿದ್ದಾರೆಂದು ಹೇಳಿದರು.ನಂತರ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ಬುದ್ದಿ ಹೇಳುವ ಮೊದಲು ಅವರು ತಮ್ಮ ಮನೆಯನ್ನು ಸರಿ ಮಾಡಿಕೊಳ್ಳಲಿ ಎಂದರು.
ಬಿಜೆಪಿಗೆ ಎಷ್ಟು ಬಾಗಿಲು ಎಂದು ನಮಗೂ ಗೊತ್ತಿಲ್ಲ. ಅವರ ಪಕ್ಷದ ವಿಚಾರ ನಾವು ಹೇಳುವುದಕ್ಕೆ ಹೋಗುವುದಿಲ್ಲ’ ಎಂದರು.ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಪಾತ್ರದ ಬಗ್ಗೆ ಆರೋಪ ಮಾಡಿರುವ ಬಿಜೆಪಿ– ಜೆಡಿಎಸ್, ಬೆಂಗಳೂರಿನಿಂದ ಮೈಸೂರುವರೆಗೆ ಆಗಸ್ಟ್ 3ರಿಂದ 7 ದಿನ ಪಾದಯಾತ್ರೆ ಹಮ್ಮಿಕೊಂಡಿದೆ.