ನವದೆಹಲಿ:
ಅದಾನಿ ಲಂಚ ವಿವಾದವನ್ನು ಜಂಟಿ ಸದನ ತನಿಖೆಗೆ ಆಗ್ರಹಿಸಿ ವಿಪಕ್ಷಗಳ INDIA ಬಣದ ಸಂಸದರು ಸಂಸತ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್, ಎಎಪಿ, ಆರ್ ಜೆಡಿ, ಶಿವಸೇನಾ (ಯುಬಿಟಿ) ಎಡರಂಗ ಸೇರಿದಂತೆ ಮತ್ತಿತರ ಪಕ್ಷಗಳ ಸಂಸದರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೊಣೆಗಾರಿಕೆಗೆ ಒತ್ತಾಯಿಸಿದರು.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಎಪಿಯ ಸಂಜಯ್ ಸಿಂಗ್, ಆರ್ ಜೆಡಿಯ ಮಿಶ್ರಾ ಭಾರತಿ ಮತ್ತು ಶಿವಸೇನೆಯ (ಯುಬಿಟಿ) ಅರವಿಂದ್ ಸಾವಂತ್ ಮತ್ತಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಲಂಚ ಮತ್ತು ವಂಚನೆ ಪ್ರಕರಣದಲ್ಲಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಮತ್ತಿತರ ಕಂಪನಿಗಳ ಸಿಬ್ಬಂದಿ ವಿರುದ್ಧ ಅಮೆರಿಕ ಆರೋಪ ಪಟ್ಟಿ ದಾಖಲಿಸಿರುವ ಹಿನ್ನೆಲೆಯಲ್ಲಿ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಮತ್ತಿತರ ಪಕ್ಷಗಳು ಆಗ್ರಹಿಸಿದವು.
ಗೌತಮ್ ಅದಾನಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ರಾಹುಲ್ ಗಾಂಧಿ ಸರ್ಕಾರವನ್ನು ಒತ್ತಾಯಿಸಿದರು. ಆದರೆ ಪ್ರತಿಪಕ್ಷಗಳ ಆರೋಪ ನಿರಾಧಾರ ಎಂದು ಅದಾನಿ ಸಮೂಹ ತಳ್ಳಿ ಹಾಕಿದೆ.