ಬೆಂಗಳೂರು
ಒಂದನೇ ತರಗತಿಗೆ ಆರು ವರ್ಷ ಕಡ್ಡಾಯ ಎಂಬ ವಿಚಾರ ಕರ್ನಾಟಕದಲ್ಲಿ ಬಹಳ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ನಿನ್ನೆ ಕರ್ನಾಟಕ ಶಿಕ್ಷಣ ಇಲಾಖೆ ವಯೋಮಿತಿ ಸಡಿಲಿಕೆ ಮಾಡಿತ್ತು. ಒಂದನೇ ತರಗತಿ ಸೇರಲು 5 ವರ್ಷ 5 ತಿಂಗಳು ಆಗಿರಬೇಕು ಎಂದು ಹೇಳಿತ್ತು. ಆದರೆ ಈ ವಯೋಮಿತಿ ಸಡಲಿಕೆ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದ್ದು, ಮುಂದಿನ ವರ್ಷಕ್ಕೂ ವಯೋಮಿತಿ ಸಡಲಿಕೆ ನೀಡುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಸರ್ಕಾರ ಈ ವರ್ಷ ಮಾತ್ರ 5.5 ವಯೋಮಿತಿ ಸಡಲಿಕೆ ಮಾಡಿದೆ. ಜೊತೆಗೆ ಯುಕೆಜಿ ಪೂರ್ಣಗೊಳಿಸಿರಬೇಕು ಅಂತಿದೆ. ಆದರೆ ಈಗಾಗಲೇ ಸರ್ಕಾರದ ಆದೇಶ ಪಾಲನೆಯಂತೆ ಎಲ್ಕೆಜಿ ಶಾಲೆಗೆ ದಾಖಲಾದ ಮಕ್ಕಳಿಗೆ ದೊಡ್ಡ ಸಂಕಷ್ಟ ಶುರುವಾಗಿದೆ. ಸದ್ಯ ಎಲ್ಕೆಜಿ ಮುಗಿಸಿರುವ ವಿದ್ಯಾರ್ಥಿಗಳು ಈ ವರ್ಷ ಯುಕೆಜಿ ಸೇರಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಈ ಮಕ್ಕಳು ಒಂದನೇ ತರಗತಿಗೆ ಬರುತ್ತಾರೆ. ಆದರೆ ಈ ಮಕ್ಕಳಿಗೆ ಕಡ್ಡಾಯ 6 ವರ್ಷ ಪೂರ್ಣವಾಗುವುದಿಲ್ಲ. ಇವರೆಲ್ಲಾ ಮತ್ತೆ ಯುಕೆಜಿಗೆ ಸೇರಬೇಕಾದ ಸ್ಥಿತಿ ಎದುರಾಗಿದೆ.
ಈ ವರ್ಷ ವಯೋಮಿತಿಯ ಅಹರ್ತೆಯ ಮೇಲೆ ಒಂದನೇ ತರಗತಿಯ ದಾಖಲಾತಿಗೆ ಮುಂದಾಗಿದ್ದಾರೆ. ಆದರೆ ಸರ್ಕಾರ ಈ ವರ್ಷ 5.5 ವರ್ಷಕ್ಕೆ ಅವಕಾಶ ನೀಡಿದೆ. ಕಳೆದ ವರ್ಷ ವಯೋಮಿತಿ ಕಾರಣಕ್ಕೆ ಒಂದನೇ ತರಗತಿಯಿಂದ ವಂಚಿತರಾದ ಪೋಷಕರು, ಇದೀಗ ನಮಗೆ ನೇರವಾಗಿ ಮುಂದಿನ ತರಗತಿಗೆ ಬಡ್ತಿ ಕೊಡಿ ಅಂತಿದ್ದಾರೆ. ಜೊತೆಗೆ ಈಗಾಗಲೇ ಯುಕೆಜಿಯಲ್ಲಿ ಓದುತ್ತಿರುವ ಪೋಷಕರು ಮುಂದಿನ ವರ್ಷಕ್ಕೂ ಅವಕಾಶ ನೀಡಿ ಅಂತಿದ್ದಾರೆ.
ಸದ್ಯ ಈ ವಯೋಮಿತಿ ಸಡಿಲಿಕೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯಮಾಡಿದೆ. ಮುಂದಿನ ವರ್ಷ ಈ ನಿಯಮ ಸಡಲಿಕೆ ಅನ್ವಯಿಸುವುದಿಲ್ಲ ಅಂತಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಮುಂದಿನ ವರ್ಷದಿಂದ ಶಾಲಾ ದಾಖಲಾತಿ ಹಾಗೂ ವಯೋಮಿತಿ ಎಸ್‌ಇಪಿ ನಿಯಮದಂತೆ ನಡೆಯಲಿದೆ ಎಂದು ಕೂಡ ಹೇಳಿದ್ದಾರೆ. ಇನ್ನು ಶಾಲಾ ಶಿಕ್ಷಣ ಇಲಾಖೆಯ ನಡೆಗೆ ಕೆಲ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
