ಬೆಂಗಳೂರು
ಕರ್ನಾಟಕ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಆಪ್ತ ಬಳಗದ ನಾಯಕ, ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ನಡೆದ ಭೇಟಿ ಹಾಗೂ ಮಾತುಕತೆ ಬಗ್ಗೆ ಸತೀಶ್ ಜಾರಕಿಹೊಳಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ವಿಚಾರದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ಪಕ್ಷ ಸಂಘಟನೆ, ಮುಂದಿನ ಚುನಾವಣೆ ಬಗ್ಗೆ ಚರ್ಚೆ ಆಗಿದೆ. ಹೈಕಮಾಂಡ್ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಲಿದೆ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಅವರಿಗೂ ಸಿಎಂ ಆಗುವ ಆಸೆ ಇರುತ್ತದೆ. ಸಿದ್ದರಾಮಯ್ಯ ಸಿಎಂ ಎಂದು ಹೈಕಮಾಂಡ್ ತೀರ್ಮಾನಿಸಿದೆ. ಈಗಲೂ, ಗೊಂದಲದ ಸಮಯದಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿ ಸಮಯ ಕೇಳುತ್ತೇನೆ. ಸಮಯ ಸಿಕ್ಕರೆ ನನ್ನ ಅಭಿಪ್ರಾಯ ಹೇಳುತ್ತೇನೆ. ಬದಲಾವಣೆ ಪರ್ವ ಏನಿಲ್ಲ. ಸಹಜವಾಗಿ ಡಿಕೆಶಿ ನನ್ನ ಭೇಟಿ ಮಾಡಿದ್ದಾರೆ. ಕೆಲವರನ್ನು ಮನೆಗೆ ಕರೆಸಿ ಭೇಟಿ ಆಗಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಎಲ್ಲಾ ಸಚಿವರು, ಶಾಸಕರನ್ನು ಭೇಟಿಯಾಗಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಬಹುಶಃ ಕೊನೆಯವನು ನಾನೇ ಇರಬೇಕು. ಸಾಕಷ್ಟು ಬಾರಿ ಡಿಕೆಶಿವಕುಮಾರ್ ಅವರು ನನ್ನನ್ನು ಭೇಟಿಯಾಗಿದ್ದಾರೆ. ಈ ಹಿಂದೆ ಮಾಜಿ ಸಂಸದ ಡಿ.ಕೆ.ಸುರೇಶ್ ಸಹ ಭೇಟಿಯಾಗಿದ್ದರು. ನಾವು ಕೂಡ ಡಿಕೆ ನಿವಾಸಕ್ಕೆ ಹೋಗಿ ಬಂದಿದ್ದೇವೆ ಎಂದರು.
ಅಧಿಕಾರ ಹಸ್ತಾಂತರ ವಿಚಾರವಾಗಿ ಎಲ್ಲ ನಾಯಕರ ಬಳಿಯೂ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡುತ್ತಿದ್ದಾರೆ. ತಮ್ಮನ್ನು ಭೇಟಿಯಾದ ಎಲ್ಲ ನಾಯಕರ ಬಳಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆ ನಡೆದಿತ್ತು. ಆ ಮಾತುಕತೆ ನಡೆದಾಗ ದೆಹಲಿಯಲ್ಲಿ 6 ಮಂದಿ ನಾಯಕರು ಉಪಸ್ಥಿತರಿದ್ದರು. ಹೀಗಾಗಿ ಅದನ್ನೇ ನಂಬಿ ಇಷ್ಟುದಿನ ಸುಮ್ಮನಿದ್ದೆ ಎಂದು ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂದು ಮಾತುಕತೆಯಾಗಿದ್ದರೂ ಈವರೆಗೆ ಅಧಿಕಾರ ಹಂಚಿಕೆ ವಿಚಾರ ಮುನ್ನೆಲೆಗೆ ಬಾರದ ಹಿನ್ನೆಲೆ ಆ ಬಗ್ಗೆ ಚರ್ಚಿಸುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಜತೆ ಸಿಎಂ ಹಾಗೂ ಡಿಸಿಎಂ ಮಾತುಕತೆ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಾಗಿತ್ತು. ಆ ಸಂದರ್ಭದಲ್ಲಿ ಡಿಕೆ ಸುರೇಶ್ ಕೂಡ ಹಾಜರಿದ್ದರು ಎಂದು ತಮ್ಮನ್ನು ಭೇಟಿಯಾದ ಎಲ್ಲ ನಾಯಕರ ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ ಎನ್ನಲಾಗಿದೆ.
