ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು: ಶರಣಗೌಡ ಕಂದಕೂರ್‌

ಬೆಳಗಾವಿ:

   ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಜೆಡಿಎಸ್ ರಾಜ್ಯ ಯುವ ಮುಖಂಡ ಹಾಗೂ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

   ಗುರುಮಠಕಲ್ ಮತಕ್ಷೇತ್ರದ ಸೈದಾಪುರ ಕ್ರಾಸ್ ಬಳಿ ಸೋಮವಾರ ಭಗವಾನ್ ಮಹರ್ಷಿ ವಾಲ್ಮೀಕಿ ವೃತ್ತ ಅನಾವರಣಕ್ಕೆ ಆಗಮಿಸಿದ್ದ ಸಚಿವ ಸತೀಶ ಜಾರಕಿಹೊಳಿ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶಾಸಕ, ಜಾರಕಿಹೊಳಿ ಮುಂದಿನ ಸಿಎಂ ಎಂದು ಘೋಷಿಸಿದಾಗ ಕರತಾಡನಗಳು ಮುಗಿಲು ಮುಟ್ಟಿದ್ದವು.

   ಸತೀಶಣ್ಣ ಮುಂದಿನ ಸಿಎಂ ಆಗಬೇಕು, 2028-29ನೇ ಸಾಲಿನ ಒಳಗೆ, ಅಂದರೆ ಮುಂದಿನ ವಿಧಾನಸಭೆ ಚುನಾವಣೆಯೊಳಗೆ ಸಿಎಂ ಆಗಬೇಕು. ಸತೀಶ್ ಅಣ್ಣ ಸರಳ ವ್ಯಕ್ತಿತ್ವ ಹೊಂದಿದ್ದಾರೆ. ಉತ್ತಮ ವ್ಯಕ್ತಿತ್ವ ಇರುವ ಜನಪರ ನಾಯಕರಾಗಿದ್ದು, ಇಂತಹ ವ್ಯಕ್ತಿತ್ವ ಹೊಂದಿರುವ ನಾಯಕ ಉನ್ನತ ಸ್ಥಾನಕ್ಕೆ ಅರ್ಹರು. ಸತೀಶ ಜಾರಕಿಹೊಳಿ ಅವರು ಸಿಎಂ ಆದರೆ ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.ಶಾಸಕ ಕಂದಕೂರ ಹೀಗೆ ಹೇಳುತ್ತಿದ್ದಂತೆಯೇ, ಜಾರಕಿಹೊಳಿ ಅಭಿಮಾನಿಗಳು ಸಂತಸದಿಂದ ಘೋಷಣೆ ಕೂಗತೊಡಗಿದರು.

   ಜಾರಕಿಹೊಳಿ ಮುಂದಿನ ಸಿಎಂ ಎನ್ನುತ್ತಿದ್ದಂತೆಯೇ ಇದು ಮತ್ತೊಂದು ವಿವಾದಕ್ಕೆ ಕಾರಣವಾಗಬಾರದೆಂದು ಮನಗಂಡ ಸತೀಶ್ ಜಾರಕಿಹೊಳಿ ಅವರು, ಘೋಷಣೆ ಕೂಗದಂತೆ ಅಭಿಮಾನಿಗಳಿಗೆ ಕೈಸನ್ನೆ ಮಾಡಿ ಸುಮ್ಮನಾಗಿಸಿದರು.

   ಶಾಸಕನ ಈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿಯವರು, ರಾಜ್ಯದ ಎಲ್ಲ ಭಾಗಗಳಲ್ಲಿ ನನ್ನ ಅಭಿಮಾನಿಗಳು ಇದ್ದಾರೆ. ನಾನು ಅವರನ್ನು ಭೇಟಿ ಮಾಡಿದ್ದಾಗ ನೀವು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಪ್ರೀತಿಯಿಂದ ಹೇಳುತ್ತಿದ್ದಾರೆ.‌ ಸದ್ಯ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಬರುವ ದಿನಗಳಲ್ಲಿ ಮುಖ್ಯಮಂತ್ರಿ ಆಗುವುದಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

Recent Articles

spot_img

Related Stories

Share via
Copy link