ಬೆಂಗಳೂರು:
ಕೇಂದ್ರ ತನಿಖಾ ಸಂಸ್ಥೆ ED ಮೂಲಕ SDPI ರಾಷ್ಟ್ರೀಯ ಅಧ್ಯಕ್ಷ MK ಫೈಝಿ ಅವರ ಅಕ್ರಮ ಬಂಧನ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರುದ್ಧ ನಡೆಯುವ ದಬ್ಬಾಳಿಕೆಯ ಮತ್ತೊಂದು ಉದಾಹರಣೆ. ಈ ಬಂಧನ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಹೋರಾಟವನ್ನು ದಮನಿಸಲು ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ನಡೆಸಿದ ರಾಜಕೀಯ ಷಡ್ಯಂತ್ರದ ಭಾಗ ಎಂದು SDPI ಕರ್ನಾಟಕ ರಾಜ್ಯ ಘಟಕ ತೀವ್ರವಾಗಿ ಖಂಡಿಸಿದೆ.
SDPI ದೇಶಾದ್ಯಂತ ಸಮಾನತೆ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಪಕ್ಷವಾಗಿದೆ. ಆದರೆ ಭಿನ್ನಮತದ ಧ್ವನಿಗಳನ್ನು ನಿಗ್ರಹಿಸಲು, ಸರ್ಕಾರ ರಾಜಕೀಯ ಪ್ರತೀಕಾರದ ಭಾಗವಾಗಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು SDPI ಮುಖಂಡರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಬಂಧನ ನಡೆಸುತ್ತಿದೆ.
ಮೋದಿಯ ನೇತೃತ್ವದ ಕೇಂದ್ರ ಸರ್ಕಾರವು ಭಿನ್ನಮತದ ಧ್ವನಿಗಳನ್ನು ತಳ್ಳಿಹಾಕಲು ತನಿಖಾ ಸಂಸ್ಥೆಗಳನ್ನು ಬಳಸುತ್ತಿರುವುದು ಇದು ಪ್ರಜಾಪ್ರಭುತ್ವದಿಂದ ನಿರಂಕುಶ ಪ್ರಭುತ್ವಕ್ಕೆ ಮಾರ್ಗ ತೋರಿಸುವ ಅಪಾಯಕರ ಬೆಳವಣಿಗೆ. 2014ರಿಂದ ಕೇಂದ್ರ ತನಿಖಾ ಸಂಸ್ಥೆಗಳು ನಡೆಸಿದ ತನಿಖೆಗಳ ಪೈಕಿ, ಬೃಹತ್ ಪ್ರಮಾಣದಲ್ಲಿ ತನಿಖೆಗಳು ಮತ್ತು ಬಂಧನಗಳು ವಿಪಕ್ಷ ನಾಯಕರು ಹಾಗೂ ಸಂಘಟನೆಗಳ ವಿರುದ್ಧವೇ ನಡೆದಿವೆ ಎಂಬುದು ಇದಕ್ಕೆ ಸಾಬೀತಾಗಿದೆ. ಆದರೆ ಬಿಜೆಪಿಗೆ ಸೇರಿದವರ ವಿರುದ್ಧ ಯಾವುದೇ ತನಿಖೆಗಳು ನಡೆಯುತ್ತಿಲ್ಲ.
ಈಗ ಇದರ ಮುಂದುವರಿದ ಭಾಗವಾಗಿ, SDPI ರಾಷ್ಟ್ರದಾದ್ಯಂತ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಶಕ್ತಿಯುತ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಸರ್ಕಾರ SDPI ರಾಷ್ಟ್ರೀಯ ಅಧ್ಯಕ್ಷರನ್ನು ED ಮೂಲಕ ಅಕ್ರಮವಾಗಿ ಬಂಧಿಸಿದ್ದು, ಈ ಬಂಧನವೇ ಸರ್ಕಾರದ ಅಸಹಿಷ್ಣುತನದ ಸ್ಪಷ್ಟ ಸಂಕೇತ.
MK ಫೈಝಿ ಅವರ ಅಕ್ರಮ ಬಂಧನವನ್ನು ಖಂಡಿಸಿ SDPI ಕರ್ನಾಟಕ ರಾಜ್ಯ ಘಟಕದಿಂದ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದೆ. SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಈ ಪ್ರತಿಭಟನೆಯಲ್ಲಿ ನೇತೃತ್ವವಹಿಸಿ ಮಾತನಾಡಿ,“ಪ್ರಜಾಪ್ರಭುತ್ವ, ನ್ಯಾಯ ಮತ್ತು ಸಮಾನತೆಗಾಗಿ ಹೋರಾಟ ನಡೆಸುವುದು ನಮ್ಮ ಕರ್ತವ್ಯ. ದ್ವೇಷ ರಾಜಕೀಯವನ್ನು ಖಂಡಿಸಿ, ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಸಮೂಹವಾಗಿ ಬೆಂಬಲ ನೀಡಲು ಎಲ್ಲ ನಾಗರಿಕರನ್ನು ಒಗ್ಗೂಡಲು ನಾವು ಕರೆಯೊಡಗಿಸುತ್ತೇವೆ” ಎಂದು ಹೇಳಿದ್ದಾರೆ.
