ಮುಂಬೈ:
ಭಾರತೀಯ ನೌಕಪಡೆ ಇತ್ತೀಚಿಗೆ ವಶಕ್ಕೆ ಪಡೆದಿದ್ದ 35 ಸೊಮಾಲಿಯಾ ಕಡಲ್ಗಳ್ಳರನ್ನು ಕಸ್ಟಮ್ಸ್ ಮತ್ತು ವಲಸೆಯ ವಿಧಿವಿಧಾನಗಳನ್ನು ಪೂರೈಸಿದ ನಂತರ ಶನಿವಾರ ಬೆಳಗ್ಗೆ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಇತ್ತೀಚೆಗೆ, ಭಾರತೀಯ ನೌಕಾಪಡೆಯು ಕಡಲ್ಗಳ್ಳತನ-ವಿರೋಧಿ ಕಾರ್ಯಾಚರಣೆಯಲ್ಲಿ MV ರುಯೆನ್ ಹಡಗಿನ 17 ಸಿಬ್ಬಂದಿಯನ್ನು ರಕ್ಷಿಸಿ, 35 ಸೊಮಾಲಿಯಾ ಕಡಲ್ಗಳ್ಳರನ್ನು ವಶಕ್ಕೆ ಪಡೆದಿತ್ತು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೊಮಾಲಿಯಾ ಕಡಲ್ಗಳ್ಳರು ಬಲ್ಗೇರಿಯನ್ ಹಡಗು ಎಂವಿ ರುಯೆನ್ ಅನ್ನು ವಶಪಡಿಸಿಕೊಂಡಿದ್ದರು. ಆದರೆ, ಕಳೆದ ವಾರ ಸಮುದ್ರದಲ್ಲಿ ಕಡಲ್ಗಳ್ಳತನ ಕೃತ್ಯವೆಸಗುವ ಉದ್ದೇಶದಿಂದ ರುಯೆನ್ ಸೊಮಾಲಿ ಜಲವನ್ನು ತೊರೆದಾಗ ಭಾರತೀಯ ನೌಕಾಪಡೆ ಅದನ್ನು ತಡೆಯಲು ಕ್ರಮ ಕೈಗೊಂಡಿತು. ಮಾಹಿತಿ ಆಧರಿಸಿ, ಭಾರತೀಯ ನೌಕಾಪಡೆಯು ಈ ಹಡಗಿನ ನೆರವಿಗೆ ಐಎನ್ ಎಸ್ ಕೋಲ್ಕತ್ಕ ನೌಕೆಯನ್ನು ರವಾನಿಸಿತ್ತು.
ನಂತರ ಮಾರ್ಚ್ 15 ರಂದು ಐಎನ್ ಎಸ್ ಕೋಲ್ಕತ್ತ, ರುಯೆನ್ ಹಡಗು ತಡೆದು ಸ್ಟೀರಿಂಗ್ ಸಿಸ್ಟಮ್ ಮತ್ತು ನ್ಯಾವಿಗೇಷನಲ್ ಸಲಕರಣೆಗಳನ್ನು ನಿಷ್ಕ್ರೀಯಗೊಳಿಸಿತ್ತು. ಈ ಕಾರ್ಯಾಚರಣೆಯಿಂದ ಭಾರತೀಯ ನೌಕಾಪಡೆ ಮಾರ್ಚ್ 16 ರಂದು MV Ruen ನ ಎಲ್ಲಾ 17 ಮೂಲ ಸಿಬ್ಬಂದಿಯನ್ನು ಯಾವುದೇ ಗಾಯವಿಲ್ಲದೆ ಕಡಲುಗಳ್ಳರ ಹಡಗಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಅಲ್ಲದೆ, 35 ಸೋಮಾಲಿ ಕಡಲ್ಗಳ್ಳರು ಅದೇ ದಿನ ಶರಣಾಗಿದ್ದರು.
ಡಾಕ್‌ಯಾರ್ಡ್‌ನಿಂದ ಕಡಲ್ಗಳ್ಳರನ್ನು ವೈದ್ಯಕೀಯ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಧ್ಯಕ್ಷ ರುಮೆನ್ ರಾದೇವ್ ಸೇರಿದಂತೆ ಬಲ್ಗೇರಿಯನ್ ನಾಯಕರು ಈ ಕಾರ್ಯಾಚರಣೆಗಾಗಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.
7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ‘ರುಯೆನ್’ ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದ (ದ) ನೌಕಾಪಡೆಯ ಕೆಚ್ಚೆದೆಯ ಕ್ರಮಕ್ಕಾಗಿ (ಪಿಎಂ ಮೋದಿ) ನನ್ನ ಪ್ರಾಮಾಣಿಕ ಕೃತಜ್ಞತೆಗಳು” ಎಂದು ರಾದೇವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಲ್ಗೇರಿಯಾದ ವಿದೇಶಾಂಗ ಸಚಿವೆ ಮರಿಯಾ ಗೇಬ್ರಿಯಲ್, ಅರಬ್ಬಿ ಸಮುದ್ರದಲ್ಲಿ ಯಶಸ್ವಿ ಕಡಲ್ಗಳ್ಳತನ-ವಿರೋಧಿ ಕಾರ್ಯಾಚರಣೆಯಲ್ಲಿ ಏಳು ಬಲ್ಗೇರಿಯನ್ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆಗೆ ಧನ್ಯವಾದ ಅರ್ಪಿಸಿದ್ದಾರೆ.