ಟ್ರಂಪ್‌ ಟ್ರೇಡ್‌ ವಾರ್ :‌ ಸೆನ್ಸೆಕ್ಸ್‌ 1300 ಅಂಕ ಕುಸಿತ

ಮುಂಬಯಿ:

   ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ ಮಧ್ಯಾಹ್ನ 1,300 ಅಂಕ ಕುಸಿತಕ್ಕೀಡಾಗಿದ್ದು, 76,016ರ ಮಟ್ಟದಲ್ಲಿತ್ತು. ನಿಫ್ಟಿ 279 ಅಂಕ ಕುಸಿತಕ್ಕೀಡಾಗಿದ್ದು, 23,069 ಅಂಕಗಳ ಮಟ್ಟದಲ್ಲಿತ್ತು.ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸುತ್ತುಮುತ್ತಲಿನ ದೇಶಗಳ ಜತೆಗೆ ವ್ಯಾಪಾರಗಳನ್ನು ನಿರ್ಬಂಧಿಸುವ ಮತ್ತು ವ್ಯಾಪಾರ ತೆರಿಗೆಗಳನ್ನು ಘೋಷಿಸಿದರು. ಇದರೊಂದಿಗೆ ಷೇರು ಮಾರುಕಟ್ಟೆ ಅಲ್ಲೋಲಕಲ್ಲೋಲವಾಗಿದೆ.

   ರಿಲಯನ್ಸ್‌ ಇಂಡಸ್ಟ್ರೀಸ್‌, ಕೋಟಕ್‌ ಬ್ಯಾಂಕ್‌ ಮತ್ತು ಜೊಮ್ಯಾಟೊ ಷೇರುಗಳ ದರ ಇಳಿಯಿತು. ಸೆನ್ಸೆಕ್ಸ್‌ ಸ್ಟಾಕ್ಸ್‌ಗಳ ಪೈಕಿ ಜೊಮ್ಯಾಟೊ ಹೆಚ್ಚು ನಷ್ಟಕ್ಕೀಡಾಯಿತು. ಅಲ್ಟ್ರಾ ಟೆಕ್‌ ಸಿಮೆಂಟ್‌, ಸನ್‌ ಫಾರ್ಮಾ, ಟಾಟಾ ಮೋಟಾರ್ಸ್‌, ಎಚ್‌ಸಿಎಲ್‌ ಟೆಕ್‌, ಟೆಕ್‌ ಮಹೀಂದ್ರಾ ಷೇರುಗಳ ದರ ಇಳಿಯಿತು. ಯುರೋಪ್‌ನಲ್ಲೂ ಷೇರು ಸೂಚ್ಯಂಕಗಳು ಕುಸಿಯಿತು.

   ಕೆನಡಾ ಮತ್ತು ಮೆಕ್ಸಿಕೊ ವಿರುದ್ಧ ವ್ಯಾಪಾರ ತೆರಿಗೆಯನ್ನು ಫೆಬ್ರವರಿ ಒಂದರಿಂದ ಜಾರಿಗೊಳಿಸಲಾಗುವುದು ಎಂದು ಡೊನಾಲ್ಡ್‌ ಟ್ರಂಪ್‌ ಘೋಷಿಸಿದರು. ಕೆನಡಾ ವಿರುದ್ಧ 25% ತೆರಿಗೆ ಜಾರಿಯಾಗಲಿದೆ. ಈ ಎರಡೂ ದೇಶಗಳಿಂದ ಅಕ್ರಮ ವಲಸೆ ಹೆಚುತ್ತಿದ್ದು, ಇದನ್ನು ನಿಯಂತ್ರಿಸಲು ತೆರಿಗೆಯ ದಂಡನೆ ಅನಿವಾರ್ಯವಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ. 

   ಈ ನಡುವೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ವ್ಯಾಪಕವಾಗಿ ಹೂಡಿಕೆ ಹಿಂತೆಗೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಅಬ್ಬರ ಮುಂದುವರಿದಿದೆ. ರೂಪಾಯಿ ಸಾರ್ವಕಾಲಿಕ ಪತನವಾಗಿದೆ. ಬಹುತೇಕ ಬ್ಲೂ ಚಿಪ್‌ ಷೇರುಗಳು ಈಗ ಡಿಸ್ಕೌಂಟ್‌ನಲ್ಲಿ ಸಿಗುತ್ತಿವೆ. ಟ್ರಂಪ್‌ ಒಂದು ವೇಳೆ ವ್ಯಾಪಾರ ಸಮರವನ್ನು ತೀವ್ರಗೊಳಿಸಿದರೆ ಷೇರು ಮಾರುಕಟ್ಟೆ ಮೇಲೆ ಮತ್ತಷ್ಟು ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ.

   ಡೊನಾಲ್ಡ್‌ ಟ್ರಂಪ್‌ ಅವರು ತೈಲ ಮತ್ತು ಅನಿಲದ ಉತ್ಪಾದನೆಯನ್ನು ಹೆಚ್ಚಳ ಮಾಡಲು ಉದ್ದೇಶಿಸಿದ್ದು, ಇದರಿಂದ ಭಾರತಕ್ಕೆ ಅನುಕೂಲವಾಗುವ ನಿರೀಕ್ಷೆ ಇದೆ. ಕಡಿಮೆ ದರದಲ್ಲಿ ಅಮೆರಿಕದ ಕಚ್ಚಾ ತೈಲ ಪೂರೈಕೆಯಾದರೆ ಭಾರತಕ್ಕೆ ಪ್ರಯೋಜನ ಸಿಗಲಿದೆ.

Recent Articles

spot_img

Related Stories

Share via
Copy link