ಪರಸ್ಪರರು ಗೌರವ ನೀಡುವುದು ಜೀವನಧರ್ಮ : ಷಾಕಿರಾ ಖಾನಮ್

ಶಿರಸಿ:

   ಜಯಪ್ರಕಾಶ ಹಬ್ಬು ಅವರು ತಮ್ಮ ಕೃತಿಯಲ್ಲಿ ಗೊಂದಲ-ನಕಾರಾತ್ಮಕತೆಯ ನಡುವೆಯೂ ಪ್ರಾಮಾಣಿಕತೆ ಹೇಗೆ ಕೆಲಸ ಮಾಡುತ್ತದೆ, ಮಾನವೀಯತೆ ಹೇಗೆ ಮಿಡಿಯುತ್ತದೆ ಎಂಬುದನ್ನು ಕಟ್ಟಿಕೊಟ್ಟಿದ್ದಾರೆ. ಪ್ರಾಮಾಣಿಕತೆ, ಪ್ರೀತಿ, ಗೌರವಗಳ ಬಗ್ಗೆ, ಮನುಷ್ಯರ ನಡುವಣ ಸಂಬಂಧಗಳ ಬಗ್ಗೆ ಅವರು ತಿಳಿಸಿದ್ದಾರೆ ಎಂಬುದಾಗಿ ಕುವೆಂಪು ಭಾಷಾ ಪ್ರಾಧಿಕಾರದ ಸದಸ್ಯೆ ಮತ್ತು ಲೇಖಕಿ ಬೆಂಗಳೂರಿನ ಪ್ರೊll ಷಾಕಿರಾ ಖಾನಮ್‌ ತಿಳಿಸಿದ್ದಾರೆ.

   ರವಿವಾರ ನಗರದ ರಂಗಧಾಮದಲ್ಲಿ, ಸಾಹಿತ್ಯ ಸಂಚಲನದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ, ಹಬ್ಬುರವರ “ನೆನಪಿನ ಜರಡಿಯಲ್ಲಿ” ಮೂಲ ಕೃತಿಯನ್ನು ಹಿಂದಿಯಲ್ಲಿ ತಾವೇ ಅನುವಾದಿಸಿದ “ಯಾದೋಂಕಿ ಛನ್ನಿ ಮೇ ಆತ್ಮಮಂಥನ್‌” ಪುಸ್ತಕವನ್ನು ಪರಿಚಯಿಸಿ, ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಒಬ್ಬರಿಗೊಬ್ಬರು ಗೌರವ ನೀಡಿದರೆ ಅದೇ ಜೀವನದ ಮೌಲ್ಯವಾಗುತ್ತದೆ. ಪ್ರಶ್ನೆ ಮಾಡುವ ಮನೋಭಾವ ಮತ್ತು ಗೌರವ-ಪ್ರೀತ್ಯಾದರಗಳು ನಮಗೆಲ್ಲ ಬೇಕು. ಒಂದು ಆತ್ಮವು ಇನ್ನೊಂದು ಆತ್ಮವನ್ನು ಗೌರವಿಸುವುದಕ್ಕೆ ಯಾವುದೇ ಜಾತಿ, ಧರ್ಮವಿಲ್ಲ. ಪುಸ್ತಕದಲ್ಲಿ ನಕಾರಾತ್ಮಕತೆ ಹಾಗೂ ಸಕಾರಾತ್ಮಕತೆ ಎರಡೂ ಇದ್ದರೂ ಸಕರಾತ್ಮಕತೆಯೇ ಗೆಲ್ಲುತ್ತದೆ ಎಂಬುದನ್ನು ಕೃತಿಕಾರರು ಚೆನ್ನಾಗಿ ಹೇಳಿದ್ದಾರೆ ಎಂದರು.

   ಶ್ರೀಮತಿ ಸಹನಾ ಕಾಂತಬೈಲು ಅವರ “ಆನೆ ಸಾಕಲು ಹೊರಟವಳು” ಮೂಲ ಕೃತಿಯನ್ನು ತಾವೇ ಹಿಂದಿಗೆ ಅನುವಾದಿಸಿದ “ಹಾಥೀ ಪಾಲನೆ ಜೋ ಚಲೀ” ಪುಸ್ತಕವನ್ನು ಪರಿಚಯಿಸಿ ಲೋಕಾರ್ಪಣೆಗೊಳಿಸಿದ ಕುವೆಂಪು ಭಾಷಾ ಪ್ರಾಧಿಕಾರದ ಮಾಜಿ ಸದಸ್ಯ ಮತ್ತು ಲೇಖಕ ಬೆಂಗಳೂರಿನ ಡಾll ಎನ್‌. ದೇವರಾಜ್ ಮಾತನಾಡಿ, ಸಹನಾ ಅವರ ಕೃತಿಯಲ್ಲಿ ನನಗೂ ಗೊತ್ತಿರದ ಗ್ರಾಮ್ಯ ಶಬ್ದಗಳೇ ಹೆಚ್ಚಾಗಿವೆ. ಹೀಗಾಗಿ ಅದನ್ನು ಅನುವಾದಿಸುವುದು ಸವಾಲಿನ ಕೆಲಸವಾಗಿತ್ತು. ಅವರ ಕೃತಿಯಲ್ಲಿನ ಸುಮಾರು ೨೦೦ ಶಬ್ದಗಳಿಗೆ ಹೊಸ ನಿಘಂಟನ್ನೇ ಮಾಡಿಕೊಳ್ಳಬೇಕಾಯಿತು. ಗ್ರಾಮೀಣ ಬದುಕನ್ನೇ ಆಧರಿಸಿ ಬರೆದ ಕೃತಿಯ ಅನುವಾದ ನನಗೆ ಅತ್ಯಂತ ತೃಪ್ತಿ ತಂದಿದೆ. ಈ ಅನುವಾದವನ್ನು ಹಿಂದಿಯವರೂ ಚೆನ್ನಾಗಿ ಸ್ವೀಕರಿಸಿದ್ದಾರೆ ಎಂದು ಹೇಳಿದರು.

   ಜಯಪ್ರಕಾಶ ಹಬ್ಬುರವರ ನೂತನ ಕವನ ಸಂಕಲನ “ಪ್ರಕೃತಿ ಹಾಗೂ ನೆರಳು” ಕೃತಿಯನ್ನು ಪರಿಚಯಿಸಿ, ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ, ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ, ಇದು ಆತ್ಮಗೀತ. ಇದರಲ್ಲಿ ಪ್ರಕೃತಿ, ನೋವು ಹಾಗೂ ತಲ್ಲಣಗಳ ಅಭಿವ್ಯಕ್ತಿ ಇದೆ. ಅವರು ಜಿಲ್ಲೆಯ ಸಾಧಕರನ್ನು ಕಾವ್ಯ ರೂಪದಲ್ಲಿ ಚಿತ್ರಿಸಿರುವುದು ವಿಶೇಷವಾಗಿದೆ ಎಂದು ಹೇಳಿದರು.

   ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ನಾಮಾಂಕಿತ ಸಾಹಿತಿ ಸಾಹಿತಿ ತಮ್ಮಣ್ಣ ಬೀಗಾರ, ಸಾಹಿತ್ಯದ ಯಾವುದೇ ಪ್ರಕಾರವಿರಲಿ, ಅದಕ್ಕೆ ಕಲಾತ್ಮಕತೆ ಬರಬೇಕೆಂದರೆ ಅದರಲ್ಲಿ ಭಾವವೂ ಮುಖ್ಯವಾಗುತ್ತದೆ. ಕೃತಿಕಾರರು ಅದನ್ನು ಯಾವ ಬೆಳಕಿನಲ್ಲಿ ನೋಡಿದ್ದಾರೆ ಎಂಬುದೂ ಪ್ರಮುಖ ಅಂಶವಾಗುತ್ತದೆ ನಾವು ಕಳೆದುಹೋದರೂ ಸಾಹಿತ್ಯದ ಆ ಭಾವ ಮುಂದುವರಿಯುತ್ತದೆ.

   ಮನುಷ್ಯ ಮಗುವಿದ್ದಾಗ ವಿಶ್ವಮಾನವ, ಬೆಳೆದಂತೆ ಅಲ್ಪಮಾನವನಾಗುತ್ತಾನೆ ಎಂದು ಕುವೆಂಪು ಹೇಳುತ್ತಿದ್ದರು. ಅಂದರೆ ಮಗುವಿದ್ದಾಗ, ದೇಶ, ಭಾಷೆ, ಪ್ರಾಂತ್ಯ, ಜಾತಿ-ಧರ್ಮ ಯಾವುದರ ಹಂಗಿಲ್ಲದ ಮಗು ವಿಶ್ವಮಾನವನಾಗಿರುತ್ತದೆ. ಬೆಳೆದಂತೆ ಮಗುವಿನಲ್ಲಿ ಇವೆಲ್ಲವೂ ಆವರಿಸಿಕೊಳ್ಳುತ್ತದೆ. ಸಾಹಿತ್ಯ ರಚನೆಯಲ್ಲಿ ನಾವು ಮಗುವಿನ ಭಾವದಲ್ಲಿಯೇ ಕೃತಿಯನ್ನು ರಚಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇನ್ನೊಬ್ಬ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿಶ್ರಾಂತ ಪತ್ರಿಕಾ ಸಂಪಾದಕ, ಲೇಖಕ, ಸಾಹಿತಿ ಅಶೋಕ ಹಾಸ್ಯಗಾರ ಮಾತನಾಡಿ, ಕನ್ನಡ ಸಾಹಿತ್ಯವನ್ನು ರಾಷ್ಟ್ರಮಟ್ಟದಲ್ಲಿ ಕೊಂಡೊಯ್ಯುವ ಕಾರ್ಯವನ್ನು ಅನುವಾದಕರು ಮಾಡಿದ್ದಾರೆ. ಇದು ನಮಗೆ ಸಂತಸದ ವಿಷಯ. ಆಂಗ್ಲಭಾಷೆಯಲ್ಲಿಯೂ ಇದು ಅನುವಾದವಾಗಲಿ ಎಂದರು.

   ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಸಂಚಲನದ ಅಧ್ಯಕ್ಷ ಶ್ರೀಕೃಷ್ಣ ಪದಕಿ ಮಾತನಾಡಿ, ಬೇರೆ ಭಾಷೆಗಳ ಪುಸ್ತಕಗಳು ಕನ್ನಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅನುವಾದವಾಗುತ್ತಿವೆ. ಆದರೆ ಕನ್ನಡದಿಂದ ಬೇರೆ ಭಾಷೆಗಳಿಗೆ ಅನುವಾದದ ಪ್ರಮಾಣ ಕಡಿಮೆ. ಅದು ಹೆಚ್ಚಾಗುವ ನಿಟ್ಟಿನಲ್ಲಿ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು.

   ಕೃತಿಕಾರರಾದ ಜಯಪ್ರಕಾಶ ಹಬ್ಬು ಹಾಗೂ ಸಹನಾ ಕಾಂತಬೈಲು ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯ, ಸಾಹಿತಿ ಮೋಹನ ಹಬ್ಬು ಸ್ವಾಗತಿಸಿ, ಪರಿಚಯಿಸಿ ಪ್ರಾಸ್ತಾವಿಕ ಮಾತನಾಡಿದರು. ನಿರ್ಮಲಾ ಹೆಗಡೆ ಗೋಳಿಕೊಪ್ಪ ಯಕ್ಷಗಾನ ಪದ್ಯದ ಮೂಲಕ ಸ್ವಾಗತ ಗೀತೆ ಹಾಡಿದರು. ರವಿ ಹೆಗಡೆ ಗಡಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ದಿನೇಶ ಮಡಿವಾಳ ವಂದಿಸಿದರು.

Recent Articles

spot_img

Related Stories

Share via
Copy link