ಕಲಬುರಗಿ:
ನಟಿ ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಯಾವ ಸಚಿವರು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು, ಬಹುಶಃ ಬಿಜೆಪಿಯ ಕೇಂದ್ರದ ಸಚಿವರು ಭಾಗಿಯಾಗಿರಬಹುದು ಎಂದು ಪ್ರತ್ಯಾರೋಪ ಮಾಡಿದರು.
ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಇಬ್ಬರು ಸಚಿವರು ಭಾಗಿ ಆರೋಪ ನಿರಾಧಾರ. ಈ ಪ್ರಕರಣದಲ್ಲಿ ರಾಜ್ಯದ ಸಚಿವರ ಪಾತ್ರ ಇರೋಕೆ ಹೇಗೆ ಸಾಧ್ಯವಿದೆ. ವಿಮಾನ ನಿಲ್ದಾಣ ನಮ್ಮ ಅಡಿಯಲ್ಲಿ ಬರುವುದಿಲ್ಲ, ಅದು ಏನಿದ್ದರೂ ಕೇಂದ್ರ ಸರ್ಕಾರದ ಅದೀನದಲ್ಲಿ ಬರುವುದರಿಂದ ಕೇಂದ್ರದ ಸಚಿವರು ಭಾಗಿಯಾಗಿದ್ದಾರೆಂದು ಹೇಳೊದು ಬಿಟ್ಟು ರಾಜ್ಯ ಸಚಿವರು ಭಾಗಿಯಾಗಿದ್ದಾರೆ ಕನ್ಪೂಸ್ ಆಗಿ ಹೇಳಿರಬೇಕು ಎಂದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಕಡಿತ ಮಾಡಲ್ಲ. ಬಿಜೆಪಿಯವರು ಭಾಗ್ಯಲಕ್ಷ್ಮೀ ಯೋಜನೆಯ ೨ ಸಾವಿರ ಬದಲಿಗೆ ೧ ಸಾವಿರ ನೀಡಲು ಕಾಂಗ್ರೆಸ್ ನಿರ್ಧಾರ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿಯೇ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಕೈ ಬಿಡುವುದಿಲ್ಲ ಮತ್ತು ಅದಕ್ಕೆ ಯಾವುದೇ ಹೊಸ ಕಂಡಿಷನ್ ಮಾಡುವುದಿಲ್ಲ. ಈ ಇದಕ್ಕೆ ಸಾರ್ವಜನಿಕರು ತಲೆಕೆಡಿಸಿಕೊಳ್ಳಬಾರದು ಎಂದು ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಸಮಿತಿ ರಚಿಸಿದ್ದೇವೆ. ಆ ಸಮಿತಿಯವರಿಗೆ ಗೌರವಧನ ರೂಪದಲ್ಲಿ ತೆರಿಗೆ ವಂತಿಗೆ ನೀಡುವ ಯೋಚನೆ ಇದೆ. ಇದನ್ನೇ ಬಿಜೆಪಿಯವರು ದೊಡ್ಡದು ಮಾಡುತ್ತಿದ್ದಾರೆ, ಬಿಜೆಪಿಯವರಿಗೆ ನಾಚಿಕೆ ಆಗಬೇಕು, ಬಿಜೆಪಿ ಅಂಗ ಸಂಸ್ಥೆಗಳಿಗೆ ಸರ್ಕಾರಿ ಭೂಮಿ, ಅನುದಾನ ನೀಡಿದೆ, ಅದರ ಬಗ್ಗೆ ಪಟ್ಟಿ ಬಿಡುಗಡೆ ಮಾಡಲಿ ನೋಡೋಣ. ಅದರ ಬಗ್ಗೆ ನಾವು ಧ್ವನಿ ಎತ್ತಿರುವುದರಿಂದ ನಮ್ಮ ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ, ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಕೋವಿಡ್ ಸಂದರ್ಭದಲ್ಲಿ ಹೆಣದ ಮೇಲೆ ಹಣ ಲೂಟಿ ಮಾಡಿದ ಬಿಜೆಪಿಯವರಿಂದ ನಾವು ಬುದ್ಧಿ ಕಲಿಯಬೇಕಾ ? ಅವರಿಗೆ ಏನು ಮಾಡಲು ಕೆಲಸವಿಲ್ಲ ಎಂದರು.
ಜಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಇಬ್ಬರು ಟಿಬಿ ರೋಗಿಗಳು ಸಾವಿಗೀಡಾಗಿರುವ ಕುರಿತು ವರದಿ ಕೇಳಿರುವೆ. ಈ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಕೇವಲ ವರದಿ ಪಡೆದು ಸುಮ್ನೆ ಕೂಡುವುದಿಲ್ಲ, ಈ ಹಿಂದೆ ತಪ್ಪಿತಸ್ಥರಿಗೆ ನೋಟಿಸ್ ನೀಡಲಾಗಿದೆ ಮತ್ತು ಅಮಾನತುಗೊಳಿಸುವ ಕೆಲಸ ಸಹ ಮಾಡಿದ್ದೇವೆ. ಸಣ್ಣ ಪುಟ್ಟ ತಪ್ಪುಗಳಿದ್ದರೆ ಅದನ್ನು ಸರಿಪಡಿಸಲಾಗುವುದು ಎಂದು ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಕೆಲವೇ ದಿನಗಳಲ್ಲಿ ಕಲಬುರಗಿಯಲ್ಲಿ ಸುಪರ್ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದೇವೆ. ಅದಕ್ಕಾಗಿ ಸಿಎಂ ಮತ್ತು ಎಐಸಿಸಿ ಅಧ್ಯಕ್ಷರಿಗೆ ಸಮಯ ಕೇಳಿದ್ದೇವೆ. ಅವರು ಸಮಯ ನೀಡಿದ ಬಳಿಕ ಉದ್ಘಾಟಿಸಲಾಗುವುದು ಎಂದರು.
